ಪಕ್ಷ ಸಂಘಟನೆಯ ಕೊರತೆ ಚುನಾವಣೆಯಲ್ಲಿ ಸೋಲಿಗೆ ಕಾರಣ :ಹಲಗೇಕರ ಅಭಿಮತ

0
35
loading...

ಕನ್ನಡಮ್ಮ ಸುದ್ದಿ- ಖಾನಾಪುರ: ಮೇ.12ರಂದು ನಡೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಭಾರತೀಯ ಜನತಾ ಪಕ್ಷದಲ್ಲಿ ಪಕ್ಷ ಸಂಘಟನೆಯ ಕೊರತೆಯ ಕಾರಣ ಪಕ್ಷಕ್ಕೆ ಸೋಲು ಉಂಟಾಯಿತು ಎಂದು ಪಕ್ಷದ ಪರಾಜಿತ ಅಭ್ಯರ್ಥಿ ವಿಠ್ಠಲ ಹಲಗೇಕರ ಅಭಿಪ್ರಾಯ ಪಟ್ಟರು.

ಪಟ್ಟಣದ ಮಲಪ್ರಭಾ ನದಿ ತೀರದ ರಾಮಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಚಿಂತನ-ಮಂಥನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪಕ್ಷ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿ ಪಕ್ಷ 30 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದು ದಾಖಲೆಯ ಮತ್ತು ಸಮಾಧಾನಕರ ವಿಷಯವಾಗಿದೆ. ಪಕ್ಷದ ಮುಖಂಡರಲ್ಲಿ ಸಮನ್ವಯತೆ ಮತ್ತು ಒಗ್ಗಟ್ಟಿನ ಕೊರತೆಯ ಕಾರಣ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲಿರುವ ನಿಟ್ಟಿನಲ್ಲಿ ಹಳೆಯ ಇತಿಹಾಸವನ್ನು ಮರೆತು ಹೊಸದಾಗಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಚುನಾವಣೆಯ ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡದ ಕಾರ್ಯಕರ್ತರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸುವ ಕೆಲಸವನ್ನು ಸಧ್ಯದಲ್ಲೇ ಕೈಗೊಳ್ಳಲಾಗುತ್ತದೆ. ಜೊತೆಗೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಗ್ರಹಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಂತೋಷ ಹಡಪದ, ಮಲ್ಲಪ್ಪ ಮಾರಿಹಾಳ, ಅಪ್ಪಯ್ಯ ಕೋಡೊಳಿ, ಬಾಬಣ್ಣ ಪಾಟೀಲ, ಧನಶ್ರೀ ಸರ್‍ದೇಸಾಯಿ, ವಲ್ಲಭ ಗುಣಾಜಿ, ಪ್ರಮೋದ ಕೊಚೇರಿ, ಬಸವರಾಜ ಸಾಣಿಕೊಪ್ಪ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

loading...