ಪಿಯು ಕಾಲೇಜುಗಳಲ್ಲಿ ಕಾಮರ್ಸ್ ವಿಭಾಗಕ್ಕೆ ಹೆಚ್ಚಿದ ಬೇಡಿಕೆ

0
18
loading...

ನಾಗರಾಜ ಪ. ಶಹಾಪುರಕರ

ಕನ್ನಡಮ್ಮ ಸುದ್ದಿ-ಹಳಿಯಾಳ: ಎಸ್ಸೆಸ್ಸೆಲ್ಸಿ ನಂತರ ಪಿಯುಸಿ ಮಾಡಲು ಕಾಮರ್ಸ್ ವಿಭಾಗಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆಯ ಅನಿವಾರ್ಯತೆ ಇದೆ.
ಮಧ್ಯಮ ವರ್ಗದ ವಿದ್ಯಾರ್ಥಿಗಳು ಶೀಘ್ರವಾಗಿ ತಮ್ಮ ಜೀವನದಲ್ಲಿ ನೆಲೆ ನಿಲ್ಲಲು, ಉಪಜೀವನಕ್ಕಾಗಿ ಬೇಗನೆ ನಾಲ್ಕು ಕಾಸು ಗಳಿಸುವಂತಾಗಲು ಕಾಮರ್ಸ್ ವಿಭಾಗವೇ ಸೂಕ್ತ ಎಂಬ ನಿರ್ಧಾರದಿಂದಾಗಿ ಈ ವಿಭಾಗದೆಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಕಾಲೇಜು ಶಿಕ್ಷಣ ನೀಡುತ್ತಿರುವ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಎರಡು ಗ್ರಾಮ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಕಾಲೇಜುಗಳಲ್ಲಿ ಕಾಮರ್ಸ್ ವಿಭಾಗದ ತರಗತಿಗೆ ಹೆಚ್ಚಿನ ದಾಖಲಾತಿ ನಡೆಯುತ್ತಿವೆ.

ಕಳೆದ ಶೈಕ್ಷಣಿಕ ವರ್ಷದ ಅಂಕಿ-ಅಂಶಗಳನ್ನು ಅವಲೋಕಿಸಿದರೆ ಉಳಿದ ವಿಭಾಗಗಳಿಗೆ ಹೋಲಿಸಿದರೆ ಕಾಮರ್ಸ್ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಪಟ್ಟಣದಲ್ಲಿರುವ ಶಿವಾಜಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷ ಪರೀಕ್ಷೆ ಬರೆದಿದ್ದ 285 ವಿದ್ಯಾರ್ಥಿಗಳಲ್ಲಿ ಸೈನ್ಸ್ 32, ಆಟ್ರ್ಸ್ 62 ವಿದ್ಯಾರ್ಥಿಗಳಿದ್ದರೆ ಕಾಮರ್ಸ್ ವಿಭಾಗದಲ್ಲಿ 191 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯವರ ವ್ಹಿ.ಡಿ. ಹೆಗಡೆ ಪಿಯು ಕಾಲೇಜಿನಲ್ಲಿ ಆಟ್ರ್ಸ್ ವಿಭಾಗದಲ್ಲಿ 58 ವಿದ್ಯಾರ್ಥಿಗಳಿದ್ದರೆ ವಾಣಿಜ್ಯ ವಿಭಾಗದಲ್ಲಿ ಈ ಸಂಖ್ಯೆ 135 ಇತ್ತು. ಗ್ರಾಮಾಂತರ ಭಾಗಗಳಾದ ಮುರ್ಕವಾಡ ಹಾಗೂ ತೇರಗಾಂವ ಗ್ರಾಮಗಳಲ್ಲಿರುವ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳಲ್ಲಿಯೂ ಸಹ ವಾಣಿಜ್ಯ ವಿಭಾಗದ ತರಗತಿಗಳಿಗೆ ಹೆಚ್ಚಿನ ಬೇಡಿಕೆ ಕಾಣಸಿಗುತ್ತಿದ್ದು ವಿದ್ಯಾರ್ಥಿಗಳು ಹಾಗೂ ಪಾಲಕರ ಅಪೇಕ್ಷೆಗೆ ತಕ್ಕಂತೆ ಕಾಲೇಜು ಆಡಳಿತ ಮಂಡಳಿ ದಾಖಲಾತಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಹಾಗೂ ಕಾಲೇಜು ತರಗತಿ ಕಾಮರ್ಸ್ ವಿಭಾಗ ನಡೆಸುವ ವಿಶೇಷ ತರಬೇತಿ ಪಡೆಯದವರಿಂದ ಅತಿಥಿ ಉಪನ್ಯಾಸಕರನ್ನು ಅರೆಕಾಲಿಕವಾಗಿ ನೇಮಿಸಿಕೊಂಡು ತರಗತಿಗಳನ್ನು ನಡೆಸುವ ಅನಿವಾರ್ಯತೆಯಿಂದಾಗಿ ವಿದ್ಯಾರ್ಥಿಗಳಿಗೆ ಯಾವ ಗುಣಮಟ್ಟದ ಶಿಕ್ಷಣ ದೊರೆಯಬಹುದು ಎಂಬ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಸರ್ಕಾರದ ಶೈಕ್ಷಣಿಕ ನೀತಿ-ನಿಯಮಗಳನ್ನು ರೂಪಿಸುವವರು ಚಿಂತನೆ ಮಾಡಬೇಕಾಗಿದ್ದು ಈ ಬಗ್ಗೆ ಶೀಘ್ರ ಸಕಾರಾತ್ಮಕ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

loading...