ಪ್ರಗತಿ ಪರಿಶೀಲನಾ ಸಭೆ

0
36
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಅಧಿಕಾರಿಗಳಾದವರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸಮಂಜಸವಾಗಲಾರದು. ಯಾವುದೇ ಇಲಾಖೆಯವರು ಅನುದಾನಕ್ಕೆ ಫಲಾನುಭವಿಗಳ ಆಯ್ಕೆ ಕಾರ್ಯಾನುಷ್ಠಾನ ಮಾಡುವ ಮುನ್ನ ನನ್ನ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರುವುದನ್ನು ಮರೆಯಬೇಡಿ ಎಂದು ಎಲ್ಲ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಖಡಕ್ ಸೂಚನೆ ನೀಡಿದರು.
ಅವರು ಮಂಗಳವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಈ ವಿಷಯ ಪ್ರಸ್ತಾಪಿಸಿದರು.

ತಾಲೂಕಿನ ಜೋಗಿಕೊಪ್ಪದಲ್ಲಿ ಪರಿವರ್ತಕ ಅಳವಡಿಸದಿರುವ ಕಾರಣ ಅಲ್ಲಿನ ನಿವಾಸಿಗಳಿಗೆ 1 ತಿಂಗಳಿನಿಂದ ಕುಡಿಯುವ ನೀರಿನ ತತ್ವಾರವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಪುರ್ಲೆಜಡ್ಡಿ ಹಾಗೂ ಹಾಸಣಗಿ ಗ್ರಾ.ಪಂ ವ್ಯಾಪ್ತಿಯ ಕೆರೆಜಡ್ಡಿಯಲ್ಲಿ ಕೂಡಾ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳು ತಾಲೂಕಿನ ಎಲ್ಲ ಪ್ರದೇಶಗಳ ಮಾಹಿತಿಯನ್ನು ಪಡೆದು ನನಗೆ ವರದಿ ನೀಡಬೇಕೆಂದು ಸೂಚಿಸಿದರು. ತಾಲೂಕಿನೆಲ್ಲೆಡೆಯ ವಿದ್ಯುತ್ ಸರಬರಾಜು ಸಮರ್ಪಕತೆಗಾಗಿ 60 ಟ್ರಾನ್ಸಫಾರರ್ಮರ ಹಾಗೂ ಸಾಕಷ್ಟು ಕಂಬಗಳನ್ನು ನೀಡಿದ್ದರೂ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು ಎಂದರು.
ಉಮ್ಮಚಗಿ-ಚಿಪಗೇರಿ ನಡುವೆ ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್ ಸರಬರಾಜಿಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ವಿದ್ಯುತ್ ಮಾರ್ಗ ಈ ವರೆಗೂ ಉಪಯೋಗಕ್ಕೆ ಬಾರದೇ ವ್ಯರ್ಥವಾಗಲು ಬಿಡಬಾರದು ಎಂದು ಶಾಸಕರು ಸೂಚಿಸಿದರು.

ಭಾರಿ ಗಾಳಿ ಮಳೆಯಿಂದಾಗಿ ಉಮ್ಮಚಗಿ ಗ್ರಾ.ಪಂನ ವಿವಿಧೆಡೆ ಮುರಿದು ಬಿದ್ದಿರುವ ಕಂಬಗಳನ್ನು ಸರಿಪಡಿಸುವಂತೆ ಮತ್ತು ಜಡ್ಡಿಗದ್ದೆಯಲ್ಲಿ ಕೆಟ್ಟಿರುವ ಪರಿವರ್ತಕವನ್ನು ಬದಲಿಸುವಂತೆ ಗ್ರಾ.ಪಂ ಅಧ್ಯಕ್ಷ ಗ.ರಾ.ಭಟ್ಟ ಶಾಸಕರ ಗಮನಕ್ಕೆ ತಂದರು.

ತಾಲೂಕಿನ ಹಿಂದುಳಿದ ವರ್ಗದ ವಸತಿ ನಿಲಯಗಳಲ್ಲಿ ಒಟ್ಟು 520 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ತಾಲೂಕಿನ ಯಾವುದಾದರೂ ಪ್ರದೇಶದಲ್ಲಿ ನಿರ್ಮಿಸಲೆಂದು 15 ಕೋಟಿ ರೂಗಳ ಅನುದಾನ ಬಂದಿದ್ದರೂ ಈ ವರೆಗೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ ಎಂದು ಬಿ.ಸಿ.ಎಂ ಅಧಿಕಾರಿ ಸರೋಜಾ ಹಳಕಟ್ಟಿ ಸಭೆಗೆ ತಿಳಿಸಿದರು. ತೋಟಗಾರಿಕಾ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಯೋಜನೆಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಹಾಸಣಗಿ ಗ್ರಾ.ಪಂ ಸದಸ್ಯ ಗುರುಪ್ರಸಾದ ಭಟ್ಟ ಆರೋಪಿಸಿ ಇನ್ನಾದರೂ ಈ ಕುರಿತು ಎಲ್ಲ ಇಲಾಖೆಗಳು ಯೋಜನೆಗಳ ಮಾಹಿತಿಯನ್ನು ನೀಡುವಂತೆ ವಿನಂತಿಸಿದರು.
ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ತಿನ್ನೇಕರ, ಪ.ಪಂ ಅಧ್ಯಕ್ಷ ಶಿರೀಷ ಪ್ರಭು, ತಹಸೀಲ್ದಾರ ಶಿವಾನಂದ ಉಳ್ಳಾಗಡ್ಡಿ, ಖಾದಿ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿಠ್ಠಲ ನಾಟೇಕರ್ ಉಪಸ್ಥಿತರಿದ್ದರು. ತಾಲೂಕಿನ ಗ್ರಾ.ಪಂ ಅಧಿಕರಿಗಳು, ವಿವಿಧ ಸ್ತರದ ಜನಪ್ರತಿನಿಧಿಗಳು ಸಭೆಯಲ್ಲಿದ್ದರು.

loading...