ಪ್ರಜಾಪ್ರಭುತ್ವ ಹಕ್ಕು ಕಸಿಯುವ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ: ನಾಗೇಶ

0
12
loading...

ಕನ್ನಡಮ್ಮ ಸುದ್ದಿ-ಬೀಳಗಿ: ಜನ ಸಾಮನ್ಯರ ಪಕ್ಷದಿಂದ ಗುರುತಿಸಿಕೊಂಡು ಬೀಳಗಿ ವಿಧನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೆ. ಆದರೆ, ಮತದಾರರ ಪಟ್ಟಿಯಲ್ಲಿಯೇ ತಮ್ಮ ಹೆಸರನ್ನು ಡಿಲಿಟ್‌ ಆಗಿರುವ ಕಾರಣವೊಡ್ಡಿ ನನ್ನ ನಾಮಪತ್ರ ತಿರಸ್ಕೃತವಾಯಿತು. ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿಕೊಂಡು ನನ್ನ ಪ್ರಜಾಪ್ರಭುತ್ವ ಹಕ್ಕು ಕಸಿಯುವ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ ಎಂದು ಉತ್ತರ ಕರ್ನಾಟಕ ಅಭಿವೃದ್ದಿ ಹೋರಾಟಗಾರ ಹಾಗೂ ಜನ ಸಮಾನ್ಯರ ಪಕ್ಷದ ಮುಖಂಡ ನಾಗೇಶ ಗೋಲಶೆಟ್ಟಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಯಾದಿಯಲ್ಲಿ ನಿಮ್ಮ ಹೆಸರಿಲ್ಲ. ಕೂಡಲೇ ಮತದಾರರ ಯಾದಿಯಲ್ಲಿ ತಮ್ಮ ಹೆಸರಿರುವ ಕುರಿತು ಹಾಜರು ಪಡಿಸಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಪ್ರಿಲ್‌ 21 ರಂದು ಚುನಾವಣಾಧಿಕಾರಿಗಳಿಂದ ನನಗೆ ನೊಟೀಸ್‌ ಬಂದಿತು. ಬೀಳಗಿ ಮತಕ್ಷೇತ್ರದ ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ಮತದಾರರ ಯಾದಿಯಲ್ಲಿ ನನ್ನ ಹೆಸರಿದೆ. ಕಳೆದ ಹಲವಾರು ಚುನಾವಣೆಗಳಲ್ಲಿ ಮತ್ತು 2017 ರ ಸ್ಥಳೀಯ ತಾಪಂ ಉಪ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ. ಮತದಾರ ಯಾದಿಯಲ್ಲಿ ಪ್ರಸಕ್ತ ನನ್ನ ಹೆಸರು ರದ್ದಾಗಿರುವುದಕ್ಕೆ ಸೂಕ್ತ ಪರಿಶೀಲನೆ ನಡೆಸಬೇಕು ಮತ್ತು ಚುನಾವಣಾ ಕಣದಿಂದ ಸ್ಪರ್ಧಿಸುವ ಅವಕಾಶ ಕಲ್ಪಿಸಬೇಕೆಂದು ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ಕೇಳಿಕೊಂಡರು ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಯಿತು. ಇದೀಗ ಜನ ಸಾಮನ್ಯರ ಪಕ್ಷದಿಂದ ಶ್ರೀಶೈಲ ಪಸಾರ ಅಧಿಕೃತ ಅಭ್ಯರ್ಥಿಯಾಗಿ ಕಣದಿಲ್ಲಿದ್ದು, ಅವರಿಗೆ ಬೆಂಬಲ ನೀಡಿ ಪ್ರಚಾರ ಕೈಗೊಂಡಿದ್ದೇನೆ. ನಾಮಪತ್ರ ತಿರಸ್ಕೃತವಾಗಲು ಪ್ರಮುಖ ಕಾರಣವಾದ ಮತದಾರ ಯಾದಿಯಲ್ಲಿ ನನ್ನ ಹೆಸರು ಡಿಲಿಟ್‌ ಆಗಿದ್ದು. ಇದು ಹೇಗಾಯ್ತು, ಹಾಗಾದರೆ, ಚುನಾವಣೆ ಸಂದರ್ಭ ಯಾರ ಹೆಸರು ಬೇಕಾದರೂ ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆ? ಮತದಾರರ ಗಮನಕ್ಕೆ ಬಾರದೆ ಈ ಕೃತ್ಯ ನಡೆದಿದೆ ಎಂದರೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಈ ಕುರಿತು ತಾವು ಮುಂದಿನ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು. ಜನ ಸಾಮನ್ಯರ ಪಕ್ಷದ ಅಭ್ಯರ್ಥಿ ಶ್ರೀಶೈಲ ಪಸಾರ ಇದ್ದರು.

loading...