ಬಿಜೆಪಿಯವರು ಬೂಟಾಟಿಕೆಯ ರಾಜಕೀಯ ಮಾಡುತ್ತಿದ್ದಾರೆ: ಮುತಾಲಿಕ್‌

0
19
loading...

ಕನ್ನಡಮ್ಮ ಸುದ್ದಿ-ಶಿರಸಿ: ಭಟ್ಕಳದ ಡಾ.ಚಿತ್ತರಂಜನ್‌ ಹಾಗೂ ತಿಮ್ಮಪ್ಪ ನಾಯ್ಕ ಅವರ ಕೊಲೆಯಾಗಿ ದಶಕಗಳೇ ಕಳೆದರೂ ಸಹ ತಪ್ಪಿಸ್ಥರ ಪತ್ತೆ ಹಚ್ಚಲಾಗದ ಬಿಜೆಪಿಯವರು ಬೂಟಾಟಿಕೆಯ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ರಾಜಕೀಯ ಅಧಿಕಾರಕ್ಕಾಗಿ ಹಿಂದುತ್ವವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಪ್ಪ ಎಸ್‌.ಕೆ. ಪರ ನಗರದಲ್ಲಿ ಮತ ಯಾಚಿಸಿ ನಂತರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಬಿಜೆಪಿಯವರು ಚುನಾವಣೆ ಬಂದಾಗ ಹಿಂದೂಗಳಿಗೆ ಮೋಸ ಮಾಡುತ್ತಾರೆ. ಅವರ ಢೋಂಗಿ ಹಿಂದುತ್ವ ಈಗ ಬಯಲಾಗಿದ್ದು, ನಿಜವಾದ ಹಿಂದೂವಾದಿಗಳಾದ ಶಿವಸೇನೆಯನ್ನು ಜನರು ಬೆಂಬಲಿಸಲಿದ್ದಾರೆ. ಹಿಂದೂಪರ ಸಂಘಟನೆಗಳಿಂದಲೇ ಆಯ್ಕೆಯಾಗುತ್ತಿರುವ ಸಂಸದ ಅನಂತಕುಮಾರ ಹೆಗಡೆ ಹಿಂದೂ ಸಂಘಟನೆಗಳನ್ನು ನೆಲಸಮ ಮಾಡಿದ್ದಾರೆ. 25 ವರ್ಷ ಆಯ್ಕೆಯಾದ ಒಬ್ಬ ಜನಪ್ರತಿನಿಧಿ ಇಡೀ ಕ್ಷೇತ್ರವನ್ನು ಮಾದರಿ ಮಾಡಬಹುದಿತ್ತು. ಆದರೆ ಅನಂತಕುಮಾರ ಹೆಗಡೆ ಚುನಾವಣೆ ಸಮಯದಲ್ಲಿ ಹಿಂದೂಗಳನ್ನು ಯಾಮಾರಿಸಿ ಅದರ ಲಾಭ ಪಡೆಯುತ್ತಿದ್ದಾರೆ ಎಂದರು.
ಶಿವಸೇನೆ, ಹಿಂದೂ ಮಹಾಸಭಾ ಮತ್ತಿತರ ಹಿಂದೂ ಸಂಘಟನೆಗಳನ್ನು ಒಂದುಗೂಡಿಸಿ ರಾಜ್ಯದಲ್ಲಿ ಸಂಯುಕ್ತ ಕೇಸರಿ ರಂಗ ಎಂಬ ಸಂಘಟನೆ ಹುಟ್ಟು ಹಾಕಿ ರಾಜ್ಯದ ವಿಧಾನಸಭಾ ಚುನಾವಣೆಗೆ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಇದರ ಮೂಲ ಉದ್ದೇಶ ಹಿಂದುತ್ವವಾಗಿದೆ. ಹಿಂದೂತ್ವ ಎಂದರೆ ಕೇವಲ ಬಿಜೆಪಿಯಲ್ಲ. ಶಿವಸೇನೆ ಹಿಂದೂಗಳ ಪರ ಹೋರಾಟ ನಡೆಸುತ್ತಿದೆ. ಬಿಜೆಪಿಯವರು ಚುನಾವಣೆಗೋಸ್ಕರ ಹಿಂದುತ್ವದ ಜಪ ಮಾಡುತ್ತಿದ್ದಾರೆ. ಬಿಜೆಪಿಯ ಪ್ರಣಾಳಿಕೆಯಲ್ಲಿ ದತ್ತ ಪೀಠ, ಹಿಂದೂ ಕಾರ್ಯಕರ್ತರ ಕೊಲೆ ವಿಚಾರ, ಟಿಪ್ಪು ಜಯಂತಿ, ಮಹದಾಯಿ ಸಮಸ್ಯೆ ಇತ್ಯರ್ಥದ ಕುರಿತಂತೆ ಯಾವುದೇ ಉಲ್ಲೇಖವಿಲ್ಲ. ರಾಜಕೀಯ ಲಾಭ ಬೇಕು. ಆದರೆ ಹಿಂದೂಗಳ ರಕ್ಷಣೆ ಬೇಕಿಲ್ಲ. ಕಳೆದ 50 ವರ್ಷದ ಕಾಂಗ್ರೆಸ್‌ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಬಿಜೆಪಿ 5 ವರ್ಷದಲ್ಲಿ ಮಾಡಿ ತೋರಿಸಿದೆ. ಅದೇ ಕಾರಣಕ್ಕೆ ರಾಜ್ಯದ ಜನ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದರು. ಈ ಬಾರಿಯೂ ಬಿಜೆಪಿ ಅದೇ ಸವದಿ, ರೇಣುಕಾಚಾರ್ಯ ಮತ್ತಿತರರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಆಕಾಶ್‌ ಎಸ್‌.ಕೆ., ರಾಜು, ಕಿಶೋರ್‌ ನಾಯ್ಕ, ಕಿರಣ್‌ ಕೆ ಮುಂತಾದವರು ಇದ್ದರು.

loading...