ಬಿಜೆಪಿ ಕಾರ್ಯಕರ್ತರಿಂದ ಕರಾಳ ದಿನ ಆಚರಣೆ

0
40
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ವಿರೋಧಿಸಿ ಬುಧವಾರ ಮಾಜಿ ಶಾಸಕ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು, ಕಪ್ಪು ಬಟ್ಟೆ ಕಟ್ಟಿಕೊಂಡು ಕರಾಳ ದಿನ ಆಚರಿಸುವುದರ ಮೂಲಕ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲಿಯ ಪ್ರವಾಸಿ ಮಂದಿರದಿಂದ ಹೊರಟ ಕಪ್ಪು ಪಟ್ಟೆದಾರೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶಿರಸಿ-ಹುಬ್ಬಳ್ಳಿ ಮಾರ್ಗ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಘೋಷಣೆ ಕೂಗುತ್ತ ಸಂಚರಿಸಿ ಬಳಿಕ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ವೇಳೆ ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾರು ಹೆಚ್ಚು ಮತಗಳನ್ನು ಪಡೆಯುವರೋ ಅವರು ಆಡಳಿತವನ್ನು ಮಾಡಬೇಕು ಎಂಬ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿವೆ. ಮೊದಲು ಅವರಪ್ಪನಾಣೆಗೂ ಕುಮಾರಣ್ಣ ಮುಖ್ಯಮಂತ್ರಿಯಾಗುವುದಿಲ್ಲ ಎಂದ ಸಿದ್ದರಾಮಯ್ಯನವರು ತಾವೇ ಹೋಗಿ 5ವರ್ಷ ನೀವೇ ಮುಖ್ಯಮಂತ್ರಿಯಾಗಿ ಎಂದು ಬೇಷರತ್ತು ಬೆಂಬಲ ನೀಡುತ್ತೇವೆ ಎಂದರು. ತಮ್ಮ ಎಲ್ಲ ತಪ್ಪುಗಳನ್ನು ಮುಚ್ಚಿಹಾಕಲು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಇಂತಹ ಅನೈತಿಕ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿಯಾದ 24ಘಂಟೆಗಳಲ್ಲಿ ಎಲ್ಲ ರೈತರ ಸಾಲ ಮನ್ನಾ ಮಾಡುವ ಮಾತನ್ನೇ ತಿರುಗಿಸಿಬಿಟ್ಟಿದ್ದಾರೆ. ಬಹುಮತವಿಲ್ಲದೇ ಇವರು ಮುಖ್ಯಮಂತ್ರಿಯಾಗುತ್ತಾರಾ? ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸೇರಿ ನಮ್ಮ ರಾಜ್ಯವನ್ನೇ ಲೂಟಿ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅಪವಿತ್ರ ಮೈತ್ರಿ ಹಾಗೂ ಅನೈತಿಕ ಸರ್ಕಾರ 5ವರ್ಷ ಅಲ್ಲ 5ತಿಂಗಳೂ ಕೂಡ ಆಡಳಿತ ನಡೆಸುವುದಿಲ್ಲ. ಹಾಗೂ ಶೀಘ್ರದಲ್ಲಿಯೇ ಮತ್ತೊಮ್ಮೆ ಚುನಾವಣೆ ನಡೆಯಲಿದ್ದು, ಈ ಬಾರಿ ನನ್ನ ಕ್ಷೇತ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಬಿಜೆಪಿ ಧುರಿಣರಾದ ಮಹೇಶ ಹೊಸಕೊಪ್ಪ, ರಾಮಕೃಷ್ಣ ಮೂಲಿಮನಿ, ಅಶೋಕ ಚಲವಾದಿ, ರಾಘವೇಂದ್ರ ಭಟ್ ಮಾತನಾಡಿದರು. ನಾಗಭೂಷಣ ಹಾವಣಗಿ, ಬಾಪೂಗೌಡ ಪಾಟೀಲ್, ವಿನಾಯಕ ರಾಯ್ಕರ, ರವಿಗೌಡ ಪಾಟೀಲ್, ಮಲ್ಲಿಕಾರ್ಜುನ ಗೌಳಿ, ಗುರುರಾಜ ಕಾಮತ, ರವಿ ಹಾವೇರಿ, ನಾಗರಾಜ ಅಂಡಗಿ, ಬಸವರಾಜ ಹರಿಜನ, ಕಲ್ಲನಗೌಡ ನಂದಿಕಟ್ಟಾ, ಮಂಜಿನಾಥ ಅಂಗಡಿ, ಕೆಂಜೊಡಿ ಗಲಬಿ, ಮಂಜು ಗೌಳಿ, ಮಹಾದೇವ ಚಲವಾದಿ, ಕಿರಣ ಕೂಸನೂರ ಮುಂತಾದವರಿದ್ದರು.

loading...