ಬೇಡಿಕೆಗಳ ಈಡೇರಿಕೆಗೆ ಒತ್ತಾಯ

0
23
loading...

ವಿಜಯಪುರ: ಗ್ರಾಮೀಣ ಅಂಚೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಜಯಪುರದಲ್ಲಿ ಗ್ರಾಮೀಣ ಅಂಚೆ ನೌಕರರು ಮುಷ್ಕರಕ್ಕೆ ನಡೆಸುತ್ತಿದ್ದಾರೆ.
ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಮೀಣ ಅಂಚೆ ನೌಕರರು ನಗರದ ಪ್ರಧಾನ ಅಂಚೇ ಕಚೇರಿ ಎದುರು ಸತ್ಯಾಗ್ರಹಕ್ಕೆ ಅಣಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಎಸ್.ವೈ.ಥೋರತ ಮಾತನಾಡಿ, ಸೇವಾ ಭದ್ರತೆ, ವೈದ್ಯಕೀಯ ನೆರವು, ಪಿಂಚಣಿ, ಕಾರ್ಮಿಕ ಕಲ್ಯಾಣ ಇಲ್ಲದೇ ಜೀತ ಪದ್ದತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ಸ್ವಾತಂತ್ರ್ಯ ದೊರಕಿ 71 ವರ್ಷಗಳು ಕಳೆದರು ಜೀತ ಪದ್ದತಿ ನಿರ್ಮೂಲನೆ ಆಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮೀಣ ಅಂಚೆ ನೌಕರರ ಪರಿಸ್ಥಿತಿ ಎಂದರು.

ಗ್ರಾಮೀಣ ಅಂಚೆ ನೌಕರರಿಗೆ ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಅನೇಕ ಸಲ ಧರಣಿ, ಉಪವಾಸ ಸತ್ಯಾಗ್ರಹ, ಹೋರಾಟ, ಅನಿರ್ಧಿಷ್ಟ ಮುಷ್ಕರ ನಡೆಸಿದರೂ ಸರಕಾರವಾಗಲಿ, ಇಲಾಖೆಯಾಗಲಿ ಕಣ್ಣು ತೆರೆದು ನೋಡಿಲ್ಲ. ಕೇಂದ್ರ ಸರ್ಕಾರ ಕಮಲೇಶಚಂದ್ರ 7ನೇ ವೇತನ ಆಯೋಗದ ವರದಿಯನ್ನು ಸುಮಾರು 2 ವರ್ಷ 6 ತಿಂಗಳಿನಿಂದ ಅನುಷ್ಠಾನಗೊಳಿಸದೇ ದಿನ ಕಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಚೆ ಇಲಾಖೆಯ ಆಧಾರದ ಸ್ತಂಭವಾಗಿರುವ ಸುಮಾರು 1.70 ಲಕ್ಷ ಜನ ಗ್ರಾಮೀಣ ಅಂಚೆ ನೌಕರರು ಇನ್ನೂ 7ನೇ ವೇತನ ಪಡೆದಿಲ್ಲ. ಅಂಚೆ ಇಲಾಖೆಯ ಸೇವೆಗಳಾದ ಗ್ರಾಮೀಣ ಅಂಚೆ ಜೀವವಿಮೆ, ಸಂಪೂರ್ಣ ಗ್ರಾಮ ಜೀವ ವಿಮೆ ಆರ್.ಡಿ.,ಟಿ.ಡಿ, ಸೇರಿದಂತೆ ಎಲ್ಲ ಪೆನ್‍ಶೆನ್‍ಗಳ ಸಾಮಾಜಿಕ ಭದ್ರತೆ ಸ್ಥಗಿತಗೊಂಡಿದೆ ಎಂದರು.

ಕೇಂದ್ರ ಸರ್ಕಾರವು ಮತ್ತು ಅಂಚೆ ಉನ್ನತ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಬೇಗನೆ ಈಡೇರಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕೆ.ಪಿ.ಹೂಗಾರ, ಕೆ.ಎ.ದೇಶಪಾಂಡೆ, ಎ.ಕೆ.ಜಲಾನಿ, ಎಸ್.ಆರ್.ನರಳೆ, ಕೆ.ಎಸ್.ಓಂಕಾರ, ಬಿ.ಎನ್.ಬಿರಾದಾರ, ಜಿ.ಎಸ್.ಬೆಳ್ಳುಬ್ಬಿ, ಟಿ.ವೈ.ಚವ್ಹಾಣ, ಪಾಯಪ್ಪ ಮಾಲಗತ್ತಿ, ಶಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ಪಿ.ಬಿ.ರಾಮಶೆಟ್ಟಿ ಪಾಲ್ಗೊಂಡಿದ್ದರು.

loading...