ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ತಾಯಿ ಪಾತ್ರ ಮಹತ್ವದ್ದು: ಶಾಸಕಿ ರೂಪಾಲಿ

0
10
loading...

ಕನ್ನಡಮ್ಮ ಸುದ್ದಿ-ಕಾರವಾರ: ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮಾಡುವುದರಲ್ಲಿ ತಾಯಂದಿರ ಪಾತ್ರ ಪ್ರಮುಖವಾದದ್ದು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿಯರು ಶ್ರೀಮತಿ ರೂಪಾಲಿ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಚಿತ್ತಾಕುಲದ ಪುನರ್ವಸತಿ ಕೇಂದ್ರದ ಸರಕಾರಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರಕಾರಿ ಪೌಢಶಾಲೆ ಚಿತ್ತಾಕುಲ, ಪುನರ್ವಸತಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಕುಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು, ಅದರಲ್ಲೂ ತಾಯಂದಿರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ತಾಯಿ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದ ಇವರು ಸಂಸ್ಕಾರದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಹೇಳಿದರು. ಮಗುವನ್ನು ಬಿಟ್ಟು ಇರುವುದು ಕಷ್ಟ ಎಂದು ಐದು ವರ್ಷವಾದರೂ ಶಾಲೆಗೆ ಕಳುಹಿಸದೇ ಹೋದರೆ ಮಗು ನಂತರದ ದಿನಗಳಲ್ಲಿ ಶಾಲೆಗೆ ಬರಲು ಹಿಂದೇಟು ಹಾಕುತ್ತದೆ. ಹೀಗಾಗಿ ಮಗುವಿನ ಶೈಕ್ಷಣಿಕ ವಿಷಯದಲ್ಲಿ ನಿರ್ಲಕ್ಷ ಮಾಡುವುದು ಸರಿಯಲ್ಲ.

ಡಿಡಿಪಿಐ ಪಿ.ಕೆ ಪ್ರಕಾಶ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯು ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದು ಉತ್ತಮ ಸಾಧನೆ ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳು ಯಾವ ಮುಂದುವರಿದ ಜಿಲ್ಲೆಯ ವಿದ್ಯಾರ್ಥಿಗಳಿಗೂ ಕಡಿಮೆ ಇಲ್ಲದಂತಹ ಸಾಧನೆ ಮಾಡಿದ್ದು ಅವರ ಸಾಧನೆಗೆ ಶುಭ ಹಾರೈಸಿದರು. ಉತ್ತಮ ವ್ಯವಸ್ಥೆ ಇರುವಲ್ಲಿ ಮಾತ್ರ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂಬುದನ್ನು ನಿರಾಕರಿಸಿದ ಅವರು ತಮ್ಮ ಸೀಮಿತ ಅವಕಾಶ ಹಾಗೂ ಸೌಲಭ್ಯಗಳ ನಡುವೆಯೇ ಸರಕಾರಿ ಶಾಲೆಗಳ ಮಕ್ಕಳು ಹೆಚ್ಚಿನ ಅಂಕ ಪಡೆದುಕೊಂಡಿದ್ದನ್ನು ಉದಾಹರಿಸಿದರು. ಉತ್ತರ ಕನ್ನಡದ ವಿದ್ಯಾರ್ಥಿಗಳೂ ತಮ್ಮ ಮಿತಿಯಲ್ಲಿಯೂ ಉತ್ತಮ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ತಾಂಡೆಲ್ ವಹಿಸಿದ್ದರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ರವಿಂದ್ರ ಪವಾರ, ವಯಸ್ಕರ ಶಿಕ್ಷಣ ನಿರ್ವಹಣಾಧಿಕಾರಿ ರಾಮಕೃಷ್ಣ ನಾಯಕ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶ್ರೀಕಾಂತ ಹೆಗಡೆ, ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಆನಂದ ಕುಮಾರ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಶಾಂತಲಾ ನಾಯಕ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲತಾ ನಾಯಕ ಸ್ವಾಗತಿಸಿದರು, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ ನಾಯ್ಕ ವಂದಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ಎಲ್. ನಾಯ್ಕ ನಿರೂಪಿಸಿದರು.ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

loading...