ಮತಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸಹಕರಿಸಿ

0
18
loading...

ಬೀಳಗಿ : ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಸಹಕರಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನಸಾಮಾನ್ಯನ ಮನೆ ಬಾಗಿಲವರೆಗೆ ತಲುಪಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಸಾಮೂಹಿಕವಾಗಿ ಎಲ್ಲ ಅಧಿಕಾರಿಗಳು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಶಾಸಕ ಮುರುಗೇಶ ನಿರಾಣಿ.
ಸಧ್ಯಕ್ಕೆ ಯಾವುದೇ ಅಧಿಕಾರಿಗಳ ವರ್ಗಾವಣೆಯಿಲ್ಲವೆಂದು ಸ್ಪಷ್ಟಪಡಿಸಿದರು.

ತಾಲೂಕ ಪಂಚಾಯತ ಸಭಾಭವನದಲ್ಲಿ ಬುಧವಾರ ಕರೆದ ವಿಧಾನ ಸಭಾ ಮತಕ್ಷೇತ್ರವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಧ್ಯದ ಪರಿಸ್ಥಿತಿಯನ್ನು ಸಮಾಲೋಚಿಸಿ ಅವರು ಮಾತನಾಡಿದರು.
ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ಪೂರ್ತಿಗೊಂಡು ಐದಾರು ವರ್ಷಗಳು ಕಳೆದರೂ ಇನ್ನೂ ಕೂಡಾ ಹಳೆಯ ಕಟ್ಟಡದಿಂದ ಕಾಲೇಜು ಅಲ್ಲಿಗೆ ಸ್ಥಳಾಂತರಗೊಂಡಿಲ್ಲವೇಕೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಹದುನೈದು ದಿನಗಳೊಳಗಾಗಿ ಅಲ್ಲಿಗೆ ಕಾಲೇಜನ್ನು ಸ್ಥಳಾಂತರಗೊಳಿಸಬೇಕೆಂದು ಸೂಚಿದರಲ್ಲದೆ ಜಿ.ಎಲ್.ಬಿ.ಸಿ. ನೀರು ಟೇಲ್ ಎಂಡ್‍ವರೆಗೆ ಹರಿಯಲು ಕ್ರಮಕೈಗೊಳ್ಳಬೇಕೆಂದರು.

ಶಿಕ್ಷಣ, ನೀರಾವರಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು. ಆ ಮೂಲಕ ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ತಾಲೂಕೆಂಬ ಹಣೆಪಟ್ಟಿಯನ್ನು ಕಳಚಿಹಾಕಲು ಕಟಿಬದ್ಧರಾಗಿ ದುಡಿದು ಕ್ಷೇತ್ರದ ಜನತೆ ತಮಗೆ ಚುನಾವಣೆಯಲ್ಲಿ ಮಾಡಿದ ಆಶೀರ್ವಾದದ ಋಉಣತೀರಿಸಲು ತಾವು ಮಾಡುವ ಪ್ರಯತ್ನಕ್ಕೆ ಅಧಿಕಾರಿ ವರ್ಗದ ಸಹಕಾರ ಅತಿಮುಖ್ಯವೆಂದು ಮುರುಗೇಶ ನಿರಾಣಿ ಹೇಳಿದರು.
ಇದಕ್ಕೂ ಮೊದಲು ಬೀಳಗಿ ಸೇರಿದಂತೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟ , ಬದಾಮಿ ತಾಲೂಕಿನ ಹಳ್ಳಿಗಳ ಸಧ್ಯದ ಪರಿಸ್ಥಿತಿಯ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿಗಳನ್ನು ಕಲೆ ಹಾಕಿದ ಶಾಸಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಶಾಸಕ ಮುರುಗೇಶ ನಿರಾಣಿಯವರಿಗೆ ತಾಲೂಕಾ ಪಂಚಾಯತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೀಳಗಿ ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಎಮ್.ಕೆ.ತೊದಲಬಾಗಿ, ಬಗಲಕೋಟೆಯ ರವಿ ಬಂಗಾರೆಪ್ಪನವರ, ಬದಾಮಿಯ ಭೀಮಪ್ಪ ಲಾಳಿ, ಮಹೇಶ ಕಕರಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಭೆಯಲ್ಲಿ ಪಾಲ್ಗೊಂಡಿದ್ದರು.

loading...