ಮತಗಟ್ಟೆಗಳಿಗೆ ಅಗತ್ಯವುಳ್ಳ ಸಾಮಗ್ರಿಗಳೊಂದಿಗೆ ತೆರಳಿದ ಸಿಬ್ಬಂದಿಗಳು

0
16
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಿಸಲಾದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಿಂದ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಭದ್ರತೆಯೊಂದಿಗೆ, ಮತದಾನಕ್ಕೆ ಅಗತ್ಯವುಳ್ಳ ಸಾಮಗ್ರಿಗಳೊಂದಿಗೆ ಶುಕ್ರವಾರ ಮತಗಟ್ಟೆಗಳಿಗೆ ತೆರಳಿದರು.
ಈ ಕುರಿತು ಕ್ಷೇತ್ರ ಚುನಾವಣಾ ಅಧಿಕಾರಿ ಮಹಾಂತೇಶಪ್ಪ ಎಂ. ಮಾಹಿತಿ ನೀಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 230 ಮತಗಟ್ಟೆಗಳಲ್ಲಿ 1380 ಕ್ಕೂ ಅಧಿಕ ಸಿಬ್ಬಂದಿಗಳನ್ನು ಚುನಾವಣಾ ಆಯೋಗವು ಕರ್ತವ್ಯಕ್ಕೆ ನಿಯೋಜಿಸಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ನಾಲ್ವರು ಮತಗಟ್ಟೆ ಅಧಿಕಾರಿಗಳು ಮತ್ತು ಒಬ್ಬ ಡಿ ದರ್ಜೆಯ ನೌಕರರನ್ನು ನಿಯೋಜಿಸಲಾಗಿದ್ದು, 138 ಕಾಯ್ದಿರಿಸಿದ ಸಿಬ್ಬಂದಿಗಳನ್ನು ಅಗತ್ಯ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ಚುನಾವಣೆಗಾಗಿ ಪ್ರತಿ ಮತಗಟ್ಟೆಗೆ ಅಧ್ಯಕ್ಷಾಧಿಕಾರಿಗಳು, ಮತ್ತು ಡಿ ದರ್ಜೆ ನೌಕರರನ್ನು ಮತಗಟ್ಟೆ ಸಿಬ್ಬಂದಿಯಾಗಿ 920 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

230 ಬ್ಯಾಲೆಟ್ ಯೂನಿಟ್, 230 ಕಂಟ್ರೋಲ್ ಯೂನಿಟ್ ಮತ್ತು 230 ವಿವಿಪ್ಯಾಟ್ ಯಂತ್ರ ಜೊತೆಗೆ ಕಾಯ್ದಿರಿಸಿದ ಬ್ಯಾಲೇಟ್ ಯುನಿಟ್ 86, ಕಂಟ್ರೋಲ್ ಯುನಿಟ್ 46 ಹಾಗೂ ವಿ.ವಿ.ಪ್ಯಾಟ್ 59 ಸೇರಿದಂತೆ, ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಒಯ್ಯಲೆಂದು 15 ಕೆಎಸ್‍ಆರ್‍ಟಿಸಿ ಬಸ್ ಮತ್ತು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಕ್ಷೇತ್ರದಲ್ಲಿ ಪಟ್ಟಣದ ಕೆಜಿಎಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸವಣಗೇರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪಿಂಕ್ ಮತಗಟ್ಟೆ ನಿರ್ಮಿಸಲಾಗಿದ್ದು, ಮುಂಡಗೋಡ ತಾಲ್ಲೂಕಿನ ಇಂದೂರ ಮತಗಟ್ಟೆಯನ್ನು ಅಂಗವಿಕಲರಿಗಾಗಿ ಜಾಗೃತ ಮತಗಟ್ಟೆಯನ್ನಾಗಿಸಲಾಗಿದೆ. ಮೊಬೈಲ್ ಸಂಪರ್ಕ ದೊರಕದ 50 ಮತಗಟ್ಟೆಗಳಿಗೆ ರನ್ನರ್‍ಗಳನ್ನು ನಿಯೋಜಿಸಲಾಗಿದೆ. 8 ವೆಬ್ ಕಾಸ್ಟಿಂಗ್ ಮತಗಟ್ಟೆಗಳಿದೆ. ಮತಗಟ್ಟೆ ಸಿಬ್ಬಂದಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‍ಗಳಿಗೆ ಅಂಚೆ ಮತಪತ್ರ ವಿತರಿಸಲಾಗಿದೆ. 38 ಸೇವಾ ಮತದಾರರಿಗೆ ಇ-ಮೇಲ್ ಮೂಲಕ ಮತಪತ್ರ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮತದಾನಕ್ಕೆ ಭಿಗಿ ಖಾಕಿ ಕಾವಲು: ಶಾಂತಿ ಹಾಗೂ ಸುವ್ಯವಸ್ಥಿತ ಮತದಾನಕ್ಕೆಅನುಕೂಲವಾಗುವಂತೆ ಬಿಗಿ ಬಂದೋ ಬಸ್ತ ಏರ್ಪಡಿಸಲಾಗಿದೆ ಎಂದು ಯಲ್ಲಾಪುರ ಸಿ.ಪಿ.ಐ ಡಾ. ಮಂಜುನಾಥ ನಾಯಕ ತಿಳಿಸಿದ್ದಾರೆ. ಕ್ಷೇತ್ರದಲ್ಲಿ 49 ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, 75 ಪೊಲೀಸ್ ಕಾನ್ಸಟೇಬಲ್, 36 ಹೆಡ್ ಕಾನ್ಸಟೇಬಲ್, 8 ಎಎಸ್‍ಐ, 3 ಪಿಎಸ್‍ಐ, 3 ಸಿ.ಪಿ.ಐ ಹಾಗೂ ಒಬ್ಬ ಎಸಿಪಿ, 118 ಗೃಹರಕ್ಷಕ ದಳ, 45 ಅರಣ್ಯ ರಕ್ಷಕರು, ಕ್ಷಿಪ್ರ ಕಾರ್ಯಾಚರಣೆಪಡೆ, ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

loading...