ಮತಯಂತ್ರಗಳಿಗೆ ಒದಗಿಸಲಾದ ಬಿಗು ಬಂದೋಬಸ್ತ

0
10
loading...

ಕನ್ನಡಮ್ಮ ಸುದ್ದಿ-ಕುಮಟಾ: ತನ್ನೆಲ್ಲಾ ತಾಪತ್ರೆಯಗಳ ನಡುವೆಯೂ ಮತದಾರ ಪ್ರಭು ತನ್ನ ಪಾಲಿನ ಕರ್ತವ್ಯವನ್ನು ಚೊಕ್ಕವಾಗಿ ಮುಗಿಸಿದ್ದು, ಜಿಲ್ಲಾದ್ಯಂತ ಒಟ್ಟೂ 46 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಲ್ಲಿನ ಹೆಗಡೆ ಮುಖ್ಯ ರಸ್ತೆಯ ಡಾ ಎ.ವಿ ಬಾಳಿಗಾ ಕಾಲೇಜಿನ ಕೊಠಡಿಗಳಲ್ಲಿ ಕ್ಷೇತ್ರವಾರು ಪ್ರಪ್ರತ್ಯೇಕವಾಗಿ ಬೀಗಮುದ್ರೆ ಜಡಿದು ಕುಳಿತಿದೆ.
ಇಲ್ಲಿನ ಡಾ ಎ ವಿ ಬಾಳಿಗಾ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೋಂಗಳಲ್ಲಿ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಸಂಗ್ರಹಿಸಿಡಲಾಗಿದ್ದು, ಸಾಕಷ್ಟು ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ ಅಹೋರಾತ್ರಿ ಸತತ ಕಾವಲು ಕಾಯುತ್ತಿದ್ದಾರೆ. ಮೇ 15 ರಂದು ಬೆಳಗಾಯಿತೆಂದರೆ ಅಭ್ಯರ್ಥಿಗಳ ಭವಿಷ್ಯ ಅನಾವರಣಗೊಳ್ಳುವ ಕಾಲ ಸನ್ನಿಹಿತವಾಗಲಿದ್ದು, ಇಡೀ ಜಿಲ್ಲೆಯ ಆ ಕ್ಷಣವನ್ನು ಕಾತುರದಿಂದ ಎದುರು ನೋಡುತ್ತಿದೆ. ಬಾಳಿಗಾ ಕಾಲೇಜಿಗೆ ಜಿಲ್ಲಾಧಿಕಾರಿ ಎಸ್ ಎಸ್ ನಕುಲ ಹಾಗೂ ಎಸ್ಪಿ ವಿನಾಯಕ ಪಾಟೀಲ್ ಅವರು ಭೇಟಿ ನೀಡಿದ್ದು, ಮತಯಂತ್ರಗಳಿಗೆ ಒದಗಿಸಲಾದ ಬಿಗು ಬಂದೋಬಸ್ತನ್ನು ಪರಿಶೀಲಿಸಿದ್ದಾರೆ. ಕಾಲೇಜಿನ ಸುತ್ತಲೂ ಭದ್ರ ಬೇಲಿಯನ್ನು ಹಾಕಲಾಗಿದ್ದು, ಯಾರನ್ನೂ ಹತ್ತಿರ ಸುಳಿಯದಂತೆ ನಿಗಾ ವಹಿಸಲಾಗಿದೆ. ಮೇ 15 ರಂದು ಪರವಾನಗಿ ಪಡೆದವರ ಹೊರತಾಗಿ ಇನ್ನುಳಿದವರಿಗೆ ಪ್ರವೇಶ ನಿಷಿದ್ಧವಾಗಿದೆ. ಮತ ಎಣಿಕೆ ಪ್ರಾರಂಭವಾದ ಗಂಟೆಯೊಳಗೆ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಯಾವ ಅಭ್ಯರ್ಥಿಗೆ ಬೇವು ಹಾಗೂ ಯಾವ ಅಭ್ಯರ್ಥಿಗೆ ಬೆಲ್ಲವೆಂದು ತಿಳಿಯಲಿದೆ.

loading...