ಮದ್ಯಪಾನದಿಂದ ಬದುಕಿನ ನೆಮ್ಮದಿ ಹಾಳು

0
20
loading...

ಬೀಳಗಿ: ಮದ್ಯಪಾನ ವ್ಯಸನದಿಂದ ಹಣ, ಆರೋಗ್ಯ, ಸಮಾಜದಲ್ಲಿ ದೊರೆಯುವ ಗೌರವಾದರಗಳು ಹೊರಟು ಹೋಗುತ್ತವೆ. ಅಲ್ಲದೆ, ಕುಟುಂಬದ ಸದಸ್ಯರು ದೂರಾಗುವುದರಿಂದ ಮಾನಸಿಕ ನೆಮ್ಮದಿಯೂ ಹಾಳಾಗಿ ಹೋಗುತ್ತದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿರ್ದೇಶಕ ಡಿ. ಎಂ. ಸಾಹುಕಾರ ಹೇಳಿದರು.
ತಾಲೂಕಿನ ಸುನಗ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಪಂ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪಿಕೆಪಿಎಸ್, 1198ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜರುಗಿರುವ ಮದ್ಯವರ್ಜನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿ, ಮದ್ಯಾಸುರನ ದಾಸರಾದರೆ ಅಮೂಲ್ಯವಾದ ಜೀವವನ್ನೇ ಬಲಿಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಪಾಯಕಾರಿ ಮದ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಗಳೇನೋ ಇವೆ. ಆದರೆ ವ್ಯಸನಿಗಳ ದೃಢ ನಿರ್ಧಾರದಿಂದ ಮಾತ್ರ ಮದ್ಯದ ಗೀಳನ್ನು ತೊರೆಯಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮದ್ಯ ವ್ಯಸನದಿಂದ ಹೊರಬರಲು ಪ್ರಯತ್ನಿಸಿದರೆ ಉತ್ತಮ ಆರೋಗ್ಯ ಹೊಂದಿ ಬಹುಕಾಲ ನೆಮ್ಮದಿಯಿಂದ ಬಾಳಲು ಸಾಧ್ಯವೆಂದು ಅವರು ಹೇಳಿದರು.
ತಾಲೂಕಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಾವೇರಿ ರಾಠೋಡ ಮಾತನಾಡಿ, ಸ್ಪರ್ಧಾತ್ಮಕವಾದ ಇಂದಿನ ದಿನಮಾನದಲ್ಲಿ `ಶಿಕ್ಷಣ ಸಂಜೀವಿನಿ’ಯಾಗಿ ಕೆಲಸ ಮಾಡುತ್ತಿರುವುದರಿಂದ ಎಲ್ಲ ದುಶ್ಚಟಗಳಿಗೂ ವಿದಾಯ ಹೇಳಿ, ಮಕ್ಕಳಿಗಾದರೂ ಯೋಗ್ಯ ಶಿಕ್ಷಣವನ್ನು ಕೊಡಿಸಿ ನಾಡಿನ ಸತ್ಪ್ರಜೆಯನ್ನಾಗಿ ರೂಪಿಸಬೇಕೆಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಆಶುಕವಿ ಸದಾಶಿವ ಆಗೋಜಿ ಜನಪದ ಗೀತೆಗಳ ಮೂಲಕ ಶಿಬಿರಾರ್ಥಿಗಳಿಗೆ ಮದ್ಯಪಾನ ಚಟದಿಂದ ಹೊರ ಬರಲು ಕಿವಿ ಮಾತು ಹೇಳಿದರು.
ವೇದಿಕೆ ಮೇಲೆ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಲ್ಲಪ್ಪ ತೋಳಮಟ್ಟಿ, ಗ್ರಾಪಂ ಅಧ್ಯಕ್ಷ ವಿಠ್ಠಲ ಕೆರಿಕಾರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಾ ಯೋಜನಾಧಿಕಾರಿ ಜ್ಯೋತಿ ಜೋಳದ, ಸಂಜೀವ ಮರಾಠೆ, ಶಿಬಿರಾಧಿಕಾರಿ ನಂದಕುಮಾರ, ಮೇಲ್ವಿಚಾರಕಿ ಶಿವಲೀಲಾ ಕರಿಸೀರಿ ಉಪಸ್ಥಿತರಿದ್ದರು. ಉಮಾ ಹಿರೇಮಠ ಸ್ವಾಗತಿಸಿದರು. ಸಚಿನ್ ಘಾಟೆ ನಿರೂಪಿಸಿದರು. ಹನಮಂತ ಹುಣಸಿಕಟ್ಟಿ ವಂದಿಸಿದರು.

loading...