ಮಳೆಗಾಲದ ಪೂರ್ವ ನಗರವನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಒತ್ತಾಯ

0
16
loading...

ಕನ್ನಡಮ್ಮ ಸುದ್ದಿ-ಶಿರಸಿ: ಮಲೆನಾಡಿಗೆ ಇನ್ನೇನು ಮಳೆರಾಯ ಕಾಲಿಡುವ ಎಲ್ಲಾ ಸೂಚನೆಗಳು ಗೋಚರಿಸುತ್ತಿದ್ದರೂ ಶಿರಸಿ ನಗರಸಭೆ ಮಾತ್ರ ಮಳೆಗಾಲದ ಪೂರ್ವ ತಯಾರಿ ಕಾಮಗಾರಿಯಲ್ಲಿ ಹಿಂದೆ ಬಿದ್ದಿದೆ. ನಗರದ ಬಹುತೇಕ ಕಡೆ ಚರಂಡಿಗಳು ಬ್ಲಾಕ್ ಆಗಿ ಗಬ್ಬು ನಾರುತ್ತಿದ್ದು, ನಗರಾಡಳಿತದಿಒಂದ ಸ್ವಚ್ಛತಾ ಕಾರ್ಯ ನಿಧಾನವಾಗಿ ನಡೆಯುತ್ತಿದೆ.
ವಾಣಿಜ್ಯ ನಗರಿ ಶಿರಸಿಯ 31 ವಾರ್ಡ್‍ಗಳಲ್ಲೂ ಕೂಡ ಮಳೆಗಾಲದ ಮುನ್ನೆಚ್ಚರಿಕಾ ಕಾರ್ಯಗಳು ಸಮರ್ಪಕವಾಗಿ ನಡೆಯದೇ ಸಾರ್ವಜನಿಕರು ನಗರಸಭೆಯ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ಬಹುತೇಕ ವಾರ್ಡುಗಳಲ್ಲಿರುವ ಚರಂಡಿಗಳಲ್ಲಿ ಘನತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿವೆ. ನಗರದ ಜನವಸತಿ ಪ್ರದೇಶಗಳಲ್ಲೂ ಸಹ ಗಟಾರ ಸ್ವಚ್ಚಗೊಳಿಸುವ ಕಾರ್ಯ ಆರಂಭವಾಗದೇ ಸೊಳ್ಳೆಗಳ ಆವಾಸ ಸ್ಥಾನವಾಗಿ ಅಕ್ಕಪಕ್ಕದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಟಾರಗಳಲ್ಲಿ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯ ತುಂಬಿ ಮಳೆ ನೀರು ಉಕ್ಕಿ ರಸ್ತೆ ಪಾಲಾಗುತ್ತಿದೆ. ಅಲ್ಲದೇ ಚರಂಡಿಗಳಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ನೀರು ಸರಾಗವಾಗಿ ಹರಿಯದೇ ರಸ್ತೆಯೆಲ್ಲಾ ನೀರಾಗುತ್ತಿದ್ದು, ಕೂಡಲೇ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮಳೆಗಾಲ ಆರಂಭವಾದ ಮೇಲೆ ಗಟಾರ ಸ್ವಚ್ಛಗೊಳಿಸುವ ಬದಲು ಮೊದಲೇ ಈ ಕಾರ್ಯವನ್ನು ಮಾಡಿದರೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಶಿರಸಿ ನಗರದ ನಿಲೇಕಣಿ, ಐದು ರಸ್ತೆ ಡೌನ್, ಶಿವಾಜಿಚೌಕ, ನಟರಾಜ ರಸ್ತೆ, ಸಿಂಪಿಗಲ್ಲಿ, ದೇವಿಕೆರೆ, ಮರಾಠಿಕೊಪ್ಪ, ಗಣೇಶನಗರ, ದುಂಡಸಿನಗರ, ಅಶ್ವಿನಿ ಸರ್ಕಲ್, ಟಿಎಸ್‍ಎಸ್ ರಸ್ತೆ, ಹುಬ್ಬಳ್ಳಿ ರಸ್ತೆ, ನೆಹರೂನಗರ, ಇಂದಿರಾನಗರ ಸೇರಿದಂತೆ ಬಹುತೇಕ ಕಡೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಇನ್ನೂ ಕೂಡ ಹಲವು ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ಸೊಳ್ಳೆಗಳ ಸಂಖ್ಯೆ ವಿಪರೀತ ಹೆಚ್ಚಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರಸಭೆ ಮಾತ್ರ ತನ್ನ ಎಂದಿನ ಚಾಳಿಯಂತೆ ಮಳೆಗಾಲ ಆರಂಭವಾಗುತ್ತಿದ್ದರೂ ಸ್ವಚ್ಚಗೊಳಿಸುವ ಕಾರ್ಯಕ್ಕೆ ಚುರುಕುತನ ಕೊಟ್ಟಿಲ್ಲ.

ಶಿರಸಿ ನಗರ ದಿನೇ ದಿನೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ನಗರಸಭೆ ನಗರದ ಬೆಳೆದಂತೆ ಅಗತ್ಯ ಮೂಲಭೂತ ಸೌಲಭ್ಯ ನೀಡಬೇಕಿದೆ. ವೈಜ್ಞಾನಿಕವಾಗಿ ಕಸ ನಿರ್ವಹಣೆಯ ಜೊತೆಗೆ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎನ್ನುತ್ತಾರೆ ನಗರದ ಹಿರಿಯ ನಾಗರಿಕ ದಿವಾಕರ ಶೆಟ್ಟಿ.

loading...