ಮಳೆಗಾಳಿಯಿಂದ ಬಾಳೆ ಬೆಳೆ ನಾಶ: 2 ಕೋಟಿ ನಷ್ಟ

0
22
loading...

ಗಂಗಾವತಿ: ನಷ್ಟ ಹೊಂದಿರುವ ಬಾಳೆ ಬೆಳೆಗಾರರಿಗೆ ಸರಕಾರದಿಂದ ಪರಿಹಾರ ಒದಗಿಸುವದಾಗಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ತಾಲೂಕಿನ ಹನುಮನಹಳ್ಳಿ, ಜಂಗ್ಲಿ, ಸಣಾಪುರ, ವಿರುಪಾಪುರಗಡ್ಡೆ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 2 ಕೋಟಿ ರೂ. ಮೌಲ್ಯದ 100 ಎಕರೆ ಬಾಳೆ ಬೆಳೆ ಸಂಪೂರ್ಣ ನಾಶಗೊಂಡಿದೆ.
ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುನವಳ್ಳಿ ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ ಸಂತೋಷಿ ರಾಣಿಯವರಿಗೆ ನಾಶ ಹೊಂದಿರುವದನ್ನು ಸಮೀಕ್ಷೆ ಮಾಡಿ ತಮಗೆ ತಿಳಿಸಬೇಕು ಎಂದು ಸೂಚನೆ ನೀಡಿದರು.

ಕೈಗೆ ಬಂದಿದ್ದ ಬಾಳೆ ಬೆಳೆ ಮಳೆ ಗಾಳಿಯಿಂದ ಸಂಪೂರ್ಣ ನಾಶಗೊಂಡಿದೆ. ಬ್ಯಾಂಕಿನಲ್ಲಿ ಮತ್ತು ಖಾಸಗಿ ವ್ಯಕ್ತಿಗಳ ಹತ್ತಿರ ಸಾಲ ಪಡೆದು ಬಾಳೆ ಕೃಷಿಯನ್ನು ಮಾಡಿದ್ದೆವು. ಇದರಿಂದ ತಮಗೆ ದಿಕ್ಕು ತೋಚದಾಗಿದೆ. ಪ್ರತಿ ಎಕರೆಗೆ 1 ಲ.ರು. ಪರಿಹಾರ ಒದಗಿಸಬೇಕು ಎಂದು ಶಾಸಕರನ್ನು ಅವರು ಮನವಿ ಮಾಡಿದರು.
ರೈತರ ಕಷ್ಟ ಅರ್ಥವಾಗುತ್ತದೆ. ಕಳೆದ ಎರಡು ವರ್ಷಗಳ ಕಾಲ ಸಕಾಲಕ್ಕೆ ಮಳೆಯಾಗದ ಕಾರಣ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಭತ್ತದ ಬೆಳೆಯನ್ನು ಬೆಳೆಯದೆ ನಷ್ಟ ಅನುಭವಿಸಿದ್ದಾರೆ ಎಂದು ಶಾಸಕರು ತಿಳಿಸಿದರು. ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಒದಗಿಸುವ ಭರವಸೆಯನ್ನು ಮುನವಳ್ಳಿ ಬಾಳೆ ಬೆಳೆಗಾರರಿಗೆ ನೀಡಿದರು.

ನಿರಾಶ್ರಿತರಿಗೆ ಸೌಲಭ್ಯ:ವಿರುಪಾಪುರ ಗಡ್ಡೆ ಪ್ರದೇಶದಲ್ಲಿ ಸುಮಾರು 65 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಇವರಿಗೆ ಪುನರ್ವಸತಿ ಕಲ್ಪಿಸುವ ಅಗತ್ಯ ಇದೆ ಸೂಕ್ತ ಸ್ಥಳ ಹುಡುಕಿ ಪುನರ್ವಸತಿ ಕಲ್ಪಿಸಲಾಗುವದು ಎಂದು ತಿಳಿಸಿದರು. ತಿಪ್ಪೇರುದ್ರಸ್ವಾಮಿ ವಕೀಲರು, ಸಂಗಾಪುರಮಠ ಸಿದ್ದರಾಮಯ್ಯಸ್ವಾಮಿ, ಬಾಗೋಡಿ ಗೌರೀಶ್, ಎನ್.ನರಸಿಂಹ, ಮಂಜುನಾಥ ಗೌಡ, ಸುದರ್ಶನ ಮತ್ತು ಪಾಂಡುರಂಗರೆಡ್ಡಿ ಇದ್ದರು.

loading...