ಮಹದಾಯಿ-ಕಪ್ಪತ್ತಗುಡ್ಡದ ಸಮಗ್ರ ಮಾಹಿತಿ ಪ್ರಧಾನಿಗೆ ಇಲ್ಲ

0
16
loading...

ಗದಗ: ಮಹದಾಯಿ ಯೋಜನೆ, ಯೋಜನೆಗೆ ಸಂಬಂಧಿಸಿದ ಬೆಳವಣಿಗೆಯ ಸಮಗ್ರ ಮಾಹಿತಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಸುಳ್ಳು ಮತ್ತು ತಪ್ಪು ಮಾಹಿತಿ ನೀಡುವ ಮೂಲಕ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವ ಎಚ್‌.ಕೆ.ಪಾಟೀಲ ಆರೋಪಿಸಿದರು.
ರವಿವಾರ ಗದುಗಿನ ಕಾಂಗ್ರೇಸ್‌ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಗದುಗಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಮಹದಾಯಿ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿಯಿಂದಾಗಿರುವ ತಪ್ಪುಗಳನ್ನು ಕಾಂಗ್ರೇಸ್‌ ಮೇಲೆ ವರ್ಗಾಯಿಸಿದ್ದಾರೆ ಎಂದರು.
ಮಹದಾಯಿ ನ್ಯಾಯಾಧೀಕರಣದ ತೀರ್ಪು ನಂತರದ ಬೆಳವಣಿಗೆ ವಾಸ್ತವಿಕತೆಯ ವಿದ್ಯಮಾನಗಳ ಸ್ಪಷ್ಠವಾದ ಮಾಹಿತಿ ಪ್ರಧಾನಿಗೆ ಇಲ್ಲ, ಮಾಹಿತಿ ಒದಗಿಸಿದವರೂ ತಪ್ಪಾಗಿ ಕೊಟ್ಟಿದ್ದಾರೆ. ಮಹದಾಯಿ ವಿಷಯವಾಗಿ ಕರ್ನಾಟಕದಿಂದ ಕಾಂಗ್ರೇಸ್‌ ಹಲವಾರು ನಿಯೋಗಗಳ ಮೂಲಕ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಾಗ ಸರಿಯಾಗಿ ಸ್ಪಂದಿಸದ ಪ್ರಧಾನಮಂತ್ರಿಗಳಿಗೆ ಇದೀಗ ಕರ್ನಾಟಕಕ್ಕೆ ಬಂದಾಗ ಅದೂ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಭರಾಟೆಯಲ್ಲಿ ತಪ್ಪು ತಪ್ಪು ಮಾಹಿತಿಯೊಂದಿಗೆ ಭಾಷಣ ಮಾಡಿರುವದು ನಗೆಪಾಟಲು ಎನ್ನುವಂತಾಗಿದೆ ಎಂದರು.
ಸಿದ್ದರಾಮಯ್ಯ 2007 ರಲ್ಲಿ ಕಾಂಗ್ರೇಸ್‌ದಲ್ಲಿ ಇರಲಿಲ್ಲ ಎಂದು ಹೇಳುವ ಮೂಲಕ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ತಮಗಿರುವ ಮಾಹಿತಿ ಕೊರತೆ ಪ್ರಜ್ಞಾವಂತರ ಮುಂದೆ ತೆರೆದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಮಾಹಿತಿಯನ್ನು ಪ್ರಧಾನಿ ತರಿಸಿಕೊಳ್ಳಬೇಕು ಇಲ್ಲವೆ ಕರ್ನಾಟಕದ ಬಿಜೆಪಿಯ ನಾಯಕರಿಗೆ ಮಾಹಿತಿ ಇದ್ದರೆ ಕೇಳಬೇಕಿತ್ತು ಎಂದು ಎಚ್‌.ಕೆ.ಪಾಟೀಲ ಹೇಳಿದರು.
ಕಪ್ಪತ್ತಗುಡ್ಡದ ಬಗ್ಗೆ ಪ್ರಧಾನಿಗೆ ಎಂದಿಲ್ಲದ ಎಲ್ಲಿಲ್ಲದ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಮುಂದಾದಾಗ ವಿರೋಧಿಸಿದ್ದು ಕಾಂಗ್ರೇಸ್‌, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ವಿಷಯ ಬಂದಾಗ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಕಾಂಗ್ರೇಸ್‌ ಸೇರಿದಂತೆ ಗದುಗಿನ ಜ.ಡಾ.ತೋಂಟದಾರ್ಯ ಶ್ರೀಗಳು ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸಿದ್ದನ್ನು ಮರೆಮಾಚಿ ಬಿಜೆಪಿ ಹೋರಾಟ ನಡೆಸಿತು ಎಂದು ಭಾಷಣದಲ್ಲಿ ಹೇಳಿಕೊಂಡಿರುವದು ನಾಚಿಗ್ಗೇಡಿನ ಸಂಗತಿಯಾಗಿದೆ.
ಮಹದಾಯಿ ಮತ್ತು ಕಪ್ಪತ್ತಗುಡ್ಡದ ಬಗ್ಗೆ ಪ್ರಜ್ಞಾವಂತ ಮತದಾರರನ್ನು ತಪ್ಪು ದಾರಿಗೆಳೆದು ಬಿಜೆಪಿಯನ್ನು ಗೆಲ್ಲಿಸುವಂತೆ ಪ್ರೇರಣೆ ನೀಡಿರುವದನ್ನು ಕನ್ನಡಿಗರು ಪ್ರಜ್ಞಾವಂತಿಕೆಯಿಂದ ಅವಲೋಕಿಸಿದ್ದಾರೆ. ಕನ್ನಡಿಗರಿಗೆ ಕನ್ನಡ ನಾಡಿಗೆ ಅಪಚಾರವೆಸಗಿರುವ ಪ್ರಧಾನಿ ಮೋದಿ ಅವರು ಕನ್ನಡಿಗರ ಕ್ಷಮೆ ಯಾಚಿಸಬೇಕು. ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತರು ಈ ವಿಷಯವನ್ನು ಗಮನಿಸಬೇಕು ಹಾಗೂ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದರು.

loading...