ಮೀನುಪ್ರಿಯರ ಗಮನಸೆಳೆಯುವ ಕಾರವಾರದ ಭಾನುವಾರದ ಒಣಮೀನು ಮಾರಾಟ ಸಂತೆ

0
17
loading...

ದೀಪಕ ಶೆಟ್ಟಿ
ಕಾರವಾರ: ಇಲ್ಲಿನ ಭಾನುವಾರದ ಸಂತೆಗೆ ಬರುವ ಗೋವಾ ಗ್ರಾಹಕರಿಗೆ ಅವಶ್ಯಕ ಒಣಮೀನು ಸಿಗದೇ ಪರದಾಡಿ, ಸ್ಥಳೀಯ ಒಣಮೀನು ವ್ಯಾಪಾರಿಗಳ ಮನೆಯಂಗಳಕ್ಕೂ ಹೋಗಿ ವಿಚಾರಿಸುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಭಾನುವಾರದ ಸಂತೆಗೆ ಕಾರವಾರ ನಗರದ ಬೈತಖೋಲ್, ಕಾಜುಬಾಗದ ಖಾರ್ವಿವಾಡಾ, ಸರ್ವೋದಯನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಮುದಗಾ, ದೇವಬಾಗ್, ಬಾವಳ್, ಮಾಜಾಳಿ ಮುಂತಾದ ಸ್ಥಳಗಳಿಂದ ಒಣಮೀನು ಯಥೇಚ್ಛವಾಗಿ ಬರುತ್ತದೆ. ಇದರ ಜೊತೆಗೆ ಅಂಕೋಲಾ ತಾಲೂಕಿನ ಬೆಲೇಕೇರಿ, ಬೆಳಂಬಾರ, ಮಂಜುಗುಣಿ ಮತ್ತು ಕುಮಟಾ ತಾಲೂಕಿನ ಗಂಗಾವಳಿ, ತದಡಿ ಹಾಗೂ ಹೊನ್ನಾವರ ಮುಂತಾದ ಕಡೆಯಿಂದಲೂ ಒಣಮೀನು ವ್ಯಾಪಾರಿಗಳಿಂದ ವಿವಿಧ ಬಗೆಯ ಒಣಮೀನು ಮಾರಾಟಕ್ಕಾಗಿ ಇಲ್ಲಿಗೆ ತರಲಾಗುತ್ತಿದೆ. ಈ ಎಲ್ಲ ಒಣಮೀನು ವ್ಯಾಪಾರಿಗಳಿಗೆ ಗೋವಾದ ವಿವಿಧೆಡೆಯಿಂದ ಬರುವ ಜನರೇ ಬಹುಮುಖ್ಯ ಗ್ರಾಹಕರಾಗಿರುತ್ತಾರೆ.
ಪ್ರತಿ ಭಾನುವಾರ ಗೋವಾ ಗ್ರಾಹಕರಿಂದಲೇ ಸಾವಿರಾರು ರೂ.ಗಳ ಒಣಮೀನು ವಹಿವಾಟು ಇಲ್ಲಿನ ಮಾರುಕಟ್ಟೆಯಲ್ಲಿ ನಡೆಯುತ್ತದೆ. ಗೋವಾದವರು ಮಳೆಗಾಲ ಪ್ರಾರಂಭವಾಗುವ ಮುನ್ನ ಮೇ ತಿಂಗಳ ಕೊನೆಯಲ್ಲಿ ಬರುವ ಭಾನುವಾರದಂದು ಅಥವಾ ಒಣಮೀನು ಒಣಗಿಸುವ ವ್ಯಾಪಾರಿಗಳ ಮನೆಯಂಗಳಕ್ಕೆ ಹೋಗಿಯೇ ಸಾಕಷ್ಟು ಪ್ರಮಾಣದ ಒಣಮೀನನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಗೋವಾದ ಗ್ರಾಹಕರಲ್ಲಿ ಹೆಚ್ಚಿನವರು ಗೋವಾದ ವಿವಿಧೆಡೆ ಇರುವ ಒಣಮೀನು ಮಾರುಕಟ್ಟೆಗಳಲ್ಲಿ ಚಿಲ್ಲರೆ ಒಣಮೀನು ಮಾರಾಟ ಮಾಡುವವರಾಗಿದ್ದಾರೆ.ಇನ್ನು ಕೆಲವರು ವೈಯಕ್ತಿಕವಾಗಿ ಮನೆಯಲ್ಲಿಯೇ ನಿತ್ಯ ಬಳಸಲು ಹಾಗೂ ಇನ್ನು ಕೆಲವರು ವಿದೇಶಗಳಿಗೆ ರಫ್ತು ಮಾಡಲು ಬೇಕಾದಷ್ಟು ಒಣಮೀನನ್ನು ಖರೀದಿಸುತ್ತಾರೆ. ಸಾಮಾನ್ಯವಾಗಿ ಹೆಚ್ಚಿನವರು ಶಾರ್ಕ್ ಮೀನು,ತೋರ್ಕೆ(ಕರೆಂಟ್‍ಫಿಶ್), ಬಂಗುಡೆ, ಬಣಗುಮೀನು, ಒಣಗಿದ ನುಚ್ಕೆ ಮೀನು, ಶೆಟ್ಲೆ ,ಬೆಳ್ಳಂಜಿ, ಹಾಂಬ್ಳೆ, ರೊಣೆಮೀನು ಹೀಗೆ ನಾನಾ ರೀತಿಯ ರುಚಿಕರ,ಕೆಂಡದ ಮೇಲೆ ಸುಟ್ಟಾಗ ಬಾಯಲ್ಲಿ ನೀರುರಿಸುವ ಮೀನನ್ನು ಮುಗಿ ಬಿದ್ದು ಖರೀದಿಸುತ್ತಾರೆ.

ಕಳೆದ ಎರಡು ತಿಂಗಳುಗಳಿಂದ ಮೀನಿನ ಕೊರತೆ ಎದುರಿಸುತ್ತಿದ್ದೇವೆ.ಬೋಟಿನವರು ಆಳ ಸಮುದ್ರದಲ್ಲಿ ಎಷ್ಟೇ ಆಳಕ್ಕೆ ಹೋದರೂ ಮೀನು ಸಿಗದೇ ಖಾಲಿ ವಾಪಸ್ ಬರುತ್ತಾರೆ.ಇದರಿಂದ ಮೀನುಗಾರಿಕೆ ಬಂದ್ ಮಾಡಲಾಗಿದೆ. ಹೀಗಾಗಿ ಒಣಗಿಸಲು ಮೀನೇ ಸಿಗದ ಕಾರಣ ಈ ಸಲದ ಸಂತೆಗೆ ದೊಡ್ಡ ಗಾತ್ರದ ದುಬಾರಿ ಬೆಲೆಬಾಳುವ ಮೀನು ಬಂದಿಲ್ಲ. ಚಿಕ್ಕ ಗಾತ್ರದ ಶೆಟ್ಲೆ, ದಿಂಡ್ಸೆ, ಬಂಗುಡೆ, ಬಣಗು ಕಡಿಮೆ ಪ್ರಮಾಣದಲ್ಲಿ ಬಂದಿದ್ದು, ಬಿಟ್ಟರೆ ಮತ್ಯಾವ ಮೀನು ಮಾರುಕಟ್ಟೆಗೆ ಬಂದಿಲ್ಲ ಎಂದು ಒಣ ಮೀನು ವ್ಯಾಪಾರಿ ಶ್ಯಾಮಲಾ ಹೇಳುತ್ತಾರೆ.
ಇಲ್ಲಿನ ಮೀನುಗಾರರು ಒಂದು ಅಥವಾ ಎರಡು ಅಡಿ ಉದ್ದದ ಶಾರ್ಕ್ ಮೀನುಗಳನ್ನು ತಲೆಯಿಂದ ಬಾಲದವರೆಗೆ ಉದ್ದವಾಗಿ ಕತ್ತರಿಸಿ ಬಟರ್ ಫ್ಲೈ ಆಕಾರ ಕೊಡುತ್ತಾರೆ. ಹೀಗೆ ಕತ್ತರಿಸಿ ಉಪ್ಪು ಹಾಕಿ ತೊಳೆದು ಒಣಗಿಸಿದ ಬಟರ್ ಫ್ಲೈ ಆಕಾರದ ಶಾರ್ಕ್ ಮೀನಿನ ಜೋಡಿಗೆ 1500 ರೂ.ನಿಂದ 2500 ರೂ.ತನಕ ಬೆಲೆ ಇದೆ. ತೊರ್ಕೆ(ಕರೆಂಟ್ ಫಿಶ್)ಮೀನಿನ ಅರ್ಧ ಭಾಗವನ್ನು ಹೆಣಿಗೆ ಆಕಾರದಲ್ಲಿ ಕತ್ತರಿಸಿ ಒಣಗಿಸಲಾಗುತ್ತದೆ. ಹೀಗೆ ಕತ್ತರಿಸಿದ ಜೋಡಿಗೆ 1000 ರೂ.ನಿಂದ 1500 ರೂ. ಬೆಲೆ ಇದೆ. ಚಿಕ್ಕ ಗಾತ್ರದ ಶೆಟ್ಲೆ ಮೀನಿನ 4 ಶೇರಿ (ಬೊಂಬಿನಿಂದ ತಯಾರಿಸಿದ ಸಣ್ಣ ಗಾತ್ರದ ಮಾಪನ)ಗೆ 100 ರೂ. ಹಾಗೂ 100 ಬಂಗುಡೆ ಮೀನಿಗೆ 500 ರೂ.ಬೆಲೆ ಈ ಭಾನುವಾರದ ಸಂತೆಯಲ್ಲಿ ನಿಗದಿಯಾಗಿತ್ತು.ಆದರೂ ಅಲ್ಪ ಪ್ರಮಾಣದಲ್ಲಿ ಬಂದಿದ್ದರಿಂದ ಬೇಗನೆ ಖಾಲಿಯಾಯಿತು ಎಂದು ವ್ಯಾಪಾರಿ ಕೇಸರಿ ಬಾನಾವಳಿ ಅವರು ಮಾಹಿತಿ ನೀಡಿದರು.

loading...