ಮುಂಗಾರು ಆರಂಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಸಭೆ

0
26
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಬೇಕಾದ ಕಾರ್ಯಗಳು ಹಾಗೂ ಮುಂಗಾರು ಆರಂಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೋಮವಾರ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಜಕ್ಕಪ್ಪಗೋಳ ಹಾಗೂ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಪರಶುರಾಮ ಗಸ್ತಿ ಸಭೆಯನ್ನು ನಡೆಸಿದರು. ಗ್ರಾಮ ಪಂಚಾಯತಗಳ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ, ರೇಷ್ಮೆ, ತೋಟಗಾರಿಕೆ, ಜಿಲ್ಲಾ ಪಂಚಾಯತನ ನೀರು ಸರಬರಾಜು ಉಪವಿಭಾಗ ಹಾಗೂ ಕೃಷಿ ಇಲಾಖೆಯ ಅನುಷ್ಠಾನಾಧಿಕಾರಿಗಳು ಪಾಲ್ಗೊಂಡಿದ್ದರು.
ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಇನ್ನು ಇದ್ದು ಇದರ ನಿವಾರಣೆಗಾಗಿ ಈ ಹಿಂದೆ ನೀಡಲಾದ ಸೂಚನೆಗಳನ್ನು ಯಥಾವತ್ತಾಗಿ ಪಾಲಿಸಬೇಕು. ತೀರಾ ಅನಿವಾರ್ಯವಿದ್ದ ಊರುಗಳಲ್ಲಿ ಖಾಸಗಿಯವರ ಗದ್ದೆಗಳಲ್ಲಿನ ಬೋರವೆಲ್‍ಗಳ ನೀರನ್ನು ಬಳಸುವುದು ಹಾಗೂ ಪಂಚಾಯತಿಯ ನೀರು ಕೊರತೆ ಇರುವ ಬೋರವೆಲ್‍ಗಳನ್ನು ಫ್ಲಸಿಂಗ್ ಮಾಡುವುದು ಅವಶ್ಯಕವಿರುವಲ್ಲಿ ನೀರೆತ್ತುವ ಮೋಟರ್‍ಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಜಕ್ಕಪ್ಪಗೋಳ ಸೂಚಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಅರಣ್ಯ ಇಲಾಖೆಯವರು ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳುವಂತೆ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಪರಶುರಾಮ ಗಸ್ತಿ ತಿಳಿಸಿದರು.
-: ರೈತರಿಗೆ ಬಿತ್ತನೆ ಬೀಜ :-

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಸಾಕಷ್ಟು ಬಿತ್ತನೆ ಬೀಜ ಸಂಗ್ರಹವಿದ್ದು, ಬೇಡಿಕೆಗಳಿಗನುಗುಣವಾಗಿ ರೈತರಿಗೆ ನೀಡಲಾಗುತ್ತಿದೆ ಎಂದು ಸಹಾಯ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು.
ಸುಧಾರಿತ ತಳಿಯ ಭತ್ತದ ಬೀಜವನ್ನು ಪ್ರತಿ ಕೆಜಿಗೆ 8 ರೂ. ಸಹಾಯಧನದಂತೆ, ಗೋವಿನಜೋಳದ ಬೀಜವನ್ನು ಪ್ರತಿ ಕೆಜಿಗೆ 20 ರೂ. ಸಹಾಯಧನದಂತೆ ನೀಡಲಾಗುತ್ತದೆ. ತಾಲೂಕಿನ ಎಲ್ಲಾ ರೈತ ಸೇವಾ ಕೇಂದ್ರಗಳಲ್ಲಿ (ಆರ್‍ಎಸ್‍ಕೆ) ಹಾಗೂ ತಾಲೂಕಾ ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹತ್ತಿ ಬೀಜ ಹಾಗೂ ರಸಗೊಬ್ಬರವನ್ನು ಖಾಸಗಿ ಅಧಿಕೃತ ಮಾರಾಟಗಾರರ ಮೂಲಕ ರೈತರು ಖರೀದಿಸಬಹುದಾಗಿದ್ದು ನಿಗದಿಪಡಿಸಿದ ಮೊತ್ತದಂತೆ ಮಾರಾಟ ಮಾಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

loading...