ಯಶಸ್ವಿ ಸಂಪನ್ನಗೊಂಡ ಅಮೃತ ನಾಯ್ಕರ ರಂಗಪ್ರವೇಶ ಕಾರ್ಯಕ್ರಮ

0
17
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿಯ ಉದಯೋನ್ಮುಖ ಭರತನಾಟ್ಯ ಕಲಾವಿದೆ ಅಮೃತಾ ನಾಯ್ಕರ ರಂಗಪ್ರವೇಶ ಕಾರ್ಯಕ್ರಮ ವಿವಿಧ ನೃತ್ಯ, ನೃತ್ಯ ರೂಪಕಗಳ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನೇತೃತ್ವದಲ್ಲಿ ರಂಗನಾಥ ಸಭಾಂಗಣದಲ್ಲಿ ನಡೆದ ಸಮರಂಭವನ್ನು ದಾಂಡೇಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಮೃತಾ ನಾಯ್ಕ ದಾಂಡೇಲಿಯ ಹೆಮ್ಮೆಯ ಕಲಾವಿದೆ.
ಇದೀಗ ಅವಳು ‘ರಂಗ ಪ್ರವೇಶ’ ಮಾಡುವ ಮೂಲಕ ತನ್ನ ಸಾಧನೆಯ ಒಂದು ಹಂತವನ್ನು ತಲುಪಿದ್ದಾಳೆ. ಈಕೆಯ ಸಾಧನೆ ಇನ್ನೂ ಹೆಚ್ಚುವಂತಾಗಲಿ. ಈಕೆಯ ಪ್ರತಿಭೆ ವಿಶ್ವದೆಲ್ಲಡೆ ಪಸರಿಸುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕ, ಲೇಖಕ ಡಾ. ಆರ್.ಜಿ. ಹೆಗಡೆಯವರು ಭರತನಾಟ್ಯ ಕಲೆ ಎಲ್ಲರಿಗೂ ಒಲಿಯಲು ಸಾದ್ಯವಿಲ್ಲ. ಅದು ಕೂಡಾ ಒಂದು ಸಾಧನೆಯ ಸಾಕ್ಷಾತ್ಕಾರವಾಗಬೇಕು. ಅಂತಹ ಕಲಾ ಸಾಕ್ಷಾತ್ಕಾರ ಅಮೃತಾ ನಾಯ್ಕಳಿಗಾಗಿದೆ. ಅಮೃತಾ ನಾಯ್ಕ ಹೆಮ್ಮೆಯ ಕಲಾವಿದೆಯಾಗಿ ಬೆಳೆದು ನಿಲ್ಲುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿದ್ದ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ. ಗಿರಿರಾಜ, ಹುಬ್ಬಳ್ಳಿಯ ಹಾನಗಲ್ ಮ್ಯುಸಿಕ್ ಪೌಂಡೇಷನ್ ಅಧ್ಯಕ್ಷ ಮನೋಜ ಹಾನಗಲ, ಕರ್ನಾಟಕ ಕೋಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ, ಹಾಗೂ ನೃತ್ಯ ಗುರು ವಿದೂಷಿ ಸಹನಾ ಭಟ್ಟ ಸಾಂದರ್ಭಿಕವಾಗಿ ಮಾತನಾಡಿದರು. ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮೃತಾ ನಾಯ್ಕಳ ತಂದೆ ಚಂದ್ರಕಾಂತ ನಾಯ್ಕ, ತಾಯಿ ತೇಜಾ ನಾಯ್ಕ, ಸಹೋದರ ಅಬಿಷೇಕ ನಾಯ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಮೃತಾ ನಾಯ್ಕ ತನ್ನ ನೃತ್ಯ ಗುರು ವಿದೂಷಿ ಸಹನಾ ಭಟ್ಟರಿಗೆ ಗುರುವಂದನೆ ಸಲ್ಲಿಸಿದರು. ನಂತರ ನಗರದ ಹಲವು ಸಂಘ ಸಂಸ್ಥೆಗಳ ಪ್ರಮುಖರು ಅಮೃತಾ ನಾಯ್ಕರನ್ನು ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿದ ಅಮೃತಾ ನಾಯ್ಕ ಅಭಿನಂದಿಸಿ, ತನ್ನ ಸಾಧನೆಗೆ ಸಹಕರಿಸಿದವರನ್ನು ಸ್ಮರಿಸಿ ಮಾತನಾಡಿದರು. ಪ್ರದೀಪ ಭಟ್ಟ ಸ್ವಾಗತಿಸಿ, ವಂದಿಸಿದರು. ಸತೀಶ ಮುರೂರ ವಂದಿಸಿದರು. ಕಾರ್ಯಕ್ರಮದಲ್ಲಿ ದರ್ಪಣ ಸುಂದರಿ, ಪುಷ್ಪಾಂಜಲಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ಜಾವಳಿ, ತಿಲ್ಲಾನ ಮುಂತಾದ ನೃತ್ಯಕಾರ್ಯಕ್ರಮಗಳು ಅಮೃತಾ ನಾಯ್ಕರಿಂದ ನಡೆದವು. ವಿದೂಷಿ ಸಹನಾ ಭಟ್ಟರ ನಟವಾಂಗ, ವಿದ್ವಾನ್ ಬಾಲಸುಭ್ರಹ್ಮಣ್ಯಂ ಶರ್ಮಾರವರ ಹಾಡುಗಾರಿಕೆ, ವಿದ್ವಾನ್ ಭಾಲಚಂದ್ರ ಬಾಗ್ವತರ ಮೃದಂಗ, ವಿದ್ವಾನ್ ದೀಪಕ ರವರ ಕೊಳಲು, ವಿದ್ವಾನ್ ಅರುಣ ರಿದಂ ಪ್ಯಾಡ ಇತ್ತು.

loading...