ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯ

0
28
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಹಳೇ ಮೀನುಮಾರುಕಟ್ಟೆಯ ಜಯನಗರದ ಹಾದೋಡಿ ಜಟಕ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲು ಎರಡು ತಿಂಗಳ ಹಿಂದೆ ಕೈಗೊಂಡ ಕಾಮಗಾರಿ ಇನ್ನುವರೆಗೂ ಪೂರ್ಣಗೊಳ್ಳದೆ ಇರುವುದರಿಂದ ಸ್ಥಳೀಯರಿಗೆ ಓಡಾಡಲು ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೇ ಮೀನುಮಾರುಕಟ್ಟೆಯ ಹಾದೋಡಿ ಜಟಕ ದೇವಸ್ಥಾನ ರಸ್ತೆ ಸಂಪೂರ್ಣ ಹದಗೆಟ್ಟಿರಿವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಾಗಾಗಿ ಸ್ಥಳೀಯರು ಈ ಹಿಂದೆ ಶಾಸಕರಾಗಿದ್ದ ಶಾರದಾ ಮೋಹನ ಶೆಟ್ಟಿ ಅವರನ್ನು ವಿನಂತಿಸಿ, ರಸ್ತೆ ಸುಧಾರಣೆಗೆ ಒತ್ತಾಯಿಸಿದ್ದರು. ಅಲ್ಪಸಂಖ್ಯಾತರ ಕಾಲೋನಿಯ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂ ವೆಚ್ಚದ 120ಮೀ ಕಾಂಕ್ರೀಟ್ ರಸ್ತೆಯನ್ನು ಮಂಜೂರಿ ಮಾಡಿಸಿದ್ದರು. ಈ ಕಾಮಗಾರಿಯ ಜವಬ್ದಾರಿ ವಹಿಸಿಕೊಂಡ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಎರಡು ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದೆ. ರಸ್ತೆಯನ್ನು ಹದಗೊಳಿಸಿ ಪಿಚ್ಚಿಂಗ್ ಮಾಡಿ, ಜಲ್ಲಿಕಲ್ಲುಗಳನ್ನು ಹಾಕಿ ರೋಲಿಂಗ್ ಮಾಡಿದ ಬಳಿಕ ಕಾಮಗಾರಿಯನ್ನು ಮೊಟಕುಗೊಳಿಸಲಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತು 2 ತಿಂಗಳು ಗತಿಸಿದರೂ ಇನ್ನು ಶುರುವಾಗದ ಕಾರಣ ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಿದ್ದರಿಂದ ದ್ವಿಚಕ್ರ ವಾಹನ ಸಂಚಾರ ಅಪಾಯಕಾರಿಯಾಗಿದೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ಅಪಘಾತವಾಗುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೆ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ರಸ್ತೆಯಲ್ಲಿ ಸೈಕಲ್ ಹೊಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಅನೇಕರು ಸೈಕಲ್ ಹಾಗೂ ಬೈಕ್‍ನಲ್ಲಿಸಂಚರಿಸುವಾಗ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕೂಡ ನಡೆದಿದೆ. ಹಾಗಾಗಿ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಿ, ಕಾಂಕ್ರೀಟ್ ರಸ್ತೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರಾದ ಆಸೀಪ್ ಸೌದಾಗರ್, ಮೋಹನ ನಾಯ್ಕ, ಜೋನ್ ಸೇರಾಂವ್, ಕೇಶವ ಮಡಿವಾಳ, ಸಂತೋಷ ಮಡಿವಾಳ, ಶ್ರೀಧರ ಶೇಟ್, ಗಣೇಶ ಶೇಟ್, ರಮೇಶ ಮಡಿವಾಳ, ರಾಘವೇಂದ್ರ ಶೆಟ್ಟಿ, ವೇರ್ನೆಸ್ ಡಿಸೋಜಾ, ಠೋಣಿ ರೊಡ್ರಗೀಸ್ ಹಾಗೂ ಇತರರು ಎಚ್ಚರಿಸಿದ್ದಾರೆ.

loading...