ರಸ್ತೆ ಮೇಲೆ ಬಸ್‌ ನಿಲುಗಡೆ: ವಾಹನಗಳ ಸಂಚಾರಕ್ಕೆ ಕಿರಿಕಿರಿ

0
10
loading...

ನರಗುಂದ: ತಾಲೂಕಿನ ಕೊಣ್ಣೂರ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಒಳ ಪ್ರವೇಶಿಸದೇ ನಿತ್ಯ ನಿಲ್ದಾಣ ಹೊರಗಡೆಯ ರಸ್ತೆಯ ಮೇಲೆಯೇ ಪ್ರಯಾಣಿಕರು ಹತ್ತಲು ಅವಕಾಶ ಮಾಡಿದ ಪರಿಣಾಮ ನಿತ್ಯ ರಸ್ತೆ ಟ್ರಾಫಿಕ್‌ ಜಾಮ ಆಗಿ ಇತರ ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟಾಗಿರುವ ಸಮಸ್ಯೆ ಎದುರಾಗಿದೆ.
ಕಳೆದ 20 ದಿನಗಳಿಂದ ಈ ಸಮಸ್ಯೆ ತಲೆದೋರಿದ್ದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ಬಸ್‌ ನಿಲ್ದಾಣ ಬಳಿಯ ಒಂದು ಬದಿಯಲ್ಲಿ ತೆಗ್ಗು ಅಗೆಯಲಾಗಿದೆ. ಬಸ್‌ ನಿಲ್ದಾಣದ ಇನ್ನೊಂದು ಬದಿಯಲ್ಲಿ ಬಸ್‌ ನಿಲ್ದಾಣ ಒಳಪ್ರವೇಶಿಸಲು ದಾರಿ ಇದ್ದರೂ ಸಹಿತ ಬಸ್ಸುಗಳನ್ನು ನಿಲ್ದಾಣ ಒಳಗೆ ಬಸ್‌ ಚಾಲಕರು ಪ್ರವೇಶಗೊಳಿಸುತ್ತಿಲ್ಲ. ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಹಳಷ್ಟು ಸಮಯ ತೆಗೆದುಕೊಳ್ಳುವುದರಿಂದ ಟ್ರಾಪಿಕ್‌ ಜಾಮ ಆಗಿ ನಿತ್ಯ ಕಿರಿಕಿರಿಯಾಗಿದೆ. ವೃದ್ದರು ಹಾಗೂ ಅಂಗವಿಕಲರು ರಸ್ತೆಯಲ್ಲಿಯೇ ಬಸ್‌ಗಳಿಗೆ ಕಾಯ್ದು ಬಸ್‌ ಹತ್ತುವ ಪರಿಪಾಠ ಬೆಳದು ಅಂತಹ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ಕುರಿತು ಬಸ್‌ ನಿಲ್ದಾಣದ ನಿಯಂತ್ರಕಾರ ಪಿ.ಎಚ್‌. ಚಕ್ರಸಾಲಿ ಅವರಿಗೂ ತಿಳಿಸಿದ್ದರೂ ಕೂಡಾ ಅವರು ನಿರ್ಲಕ್ಷಮಾಡಿದ್ದಾರೆಂದು ಕೊಣ್ಣೂರ ಗ್ರಾಮಸ್ಥರು ಮತ್ತು ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಬಸ್‌ ಚಾಲಕರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಈ ಕುರಿತು ಬಸ್‌ಡಿಪೋ ಪ್ರಭಾರಿ ವ್ಯವಸ್ಥಾಪಕ ಎಚ್‌.ಟಿ. ಬೆಳವಟಿಗಿಯವರು ವಿವರಿಸಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕಳೆದ 20 ದಿನಗಳಿಂದ ಕೊಣ್ಣೂರ ಬಸ್‌ನಿಲ್ದಾನ ಬಳಿ ನಡೆದಿದೆ. ಅದರೆ ಬಸ್‌ ನಿಲ್ದಾಣದ ಒಂದು ಭಾಗದಲ್ಲಿ ಬಸ್‌ಗಳು ಒಳಪ್ರವೇಶಮಾಡಲು ಅನುಕೂಲವಿದ್ದರೂ ಬಸ್‌ ಚಾಲಕರು ಆವರಣ ಪ್ರವೇಶಮಾಡುತ್ತಿಲ್ಲವೆಂದು ಈಗೀಗ ಮಾಹಿತಿ ದೊರಕಿದೆ. ಎರಡು ದಿನಗಳಲ್ಲಿ ಈ ಸಮಸ್ಯೆ ಪರಿಹರಿಸಿ ಬಸ್‌ ಚಾಲಕರಿಗೆ ಕಡ್ಡಾಯ ಸೂಚನೆ ನೀಡಿ ಬಸ್‌ ನಿಲ್ದಾಣ ಒಳ ಆವರಣದಲ್ಲಿ ಬಸ್‌ ಪ್ರವೇಶಗೊಳಿಸಲು ತಿಳಿಸಲಾಗುವುದೆಂದು ಹೇಳಿದ್ದಾರೆ.

loading...