ರಸ್ತೆ ಸರಿಪಡಿಸುವಂತೆ ಒತ್ತಾಯ

0
26
loading...

ಮುಂಡಗೋಡ: ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಅಳವಡಿಕೆಗಾಗಿ ಪಟ್ಟಣದ ಬಹುತೇಕ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದ್ದು, ವಾಹನ ಹಾಗೂ ಸಾರ್ವಜನಿಕರು ತಿರುಗಾಡುವುದು ಕಷ್ಟವಾಗುತ್ತಿದೆ. ಮಳೆ ಪ್ರಾರಂಭವಾದರೆ ಮತ್ತಷ್ಟು ಸಮಸ್ಯೆಯಾಗಲಿದೆ ಹಾಗಾಗಿ ತಕ್ಷಣ ಗುತ್ತಿಗೆದಾರರನ್ನು ಕರೆಸಿ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸರಿಪಡಿಲು ಸೂಚಿಸುವಂತೆ ಪ.ಪಂ ಸದಸ್ಯ ವಿನಾಯಕ ರಾಯ್ಕರ ಒತ್ತಾಯಿಸಿದರು ಶನಿವಾರ ಇಲ್ಲಿಯ ಪ.ಪಂ ಸಭಾಂಗಣದಲ್ಲಿ ಜರುಗಿದ ಮಾಸಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ದ್ವನಿ ಎತ್ತಿದ ವಿನಾಯಕ ರಾಯ್ಕರ, ಕಾಮಗಾರಿ ವಿಳಂಭದಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಗುತ್ತಿಗೆದಾರರಿಗೆ ಹೇಳುವರು ಕೇಳುವರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ವಿದ್ಯುತ್ ದೀಪ ನಿರ್ವಹಣೆ ಸರಿಯಾಗಿಲ್ಲ. ದುರಸ್ಥಿ ಬಗ್ಗೆ ದೂರಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಿರ್ವಹಣೆ ಗುತ್ತಿಗೆ ಪಡೆದಿರುವರ ಬಳಿ ಸಮರ್ಪಕ ಸಲಕರಣೆಗಳು ಲಬ್ಯವಿಲ್ಲ ಎಂಬ ಹಾರಿಕೆ ಉತ್ತರ ಸಿಗುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ.ಪಂ ಸದಸ್ಯ ಸಂಜೀವ ಪಿಸೆ ಪ್ರಶ್ನಿಸಿದರು. ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ನಿರ್ವಹಣೆ ಮಾಡುವ ಬಗ್ಗೆ ಎಚ್ಚರಿಕೆ ನೀಡುವುದಾಗಿ ಮುಖ್ಯಾಧಿಕಾರಿ ಸಂಗನಬಸಯ್ಯ ಬರವಸೆ ನೀಡಿದರು. ನಗರದ ಸ್ಲಂ ಬಡಾವಣೆಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಸ್ಲಂ ಬೋರ್ಡನಿಂದ ಪತ್ರ ಬಂದಿದ್ದು, ಪಟ್ಟಣದ ಸ್ಲಂಗಳನ್ನು ಗುರುತಿಸಿ ಅಗತ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ತಕ್ಷಣ ಸ್ಲಂ ಬೋರ್ಡಗೆ ಸಲ್ಲಿಸಬೇಕಿದೆ. ಹಾಗಾಗಿ ಅಂತಹ ಬಡಾವಣೆಗಳಿಗೆ ಸಂಬಂಧಿಸಿದ ಸದಸ್ಯರು ಹೆಚ್ಚಿನ ಮುತುವರ್ಜಿವಹಿಸಿ ತಕ್ಷಣ ಮಾಹಿತಿ ನೀಡುವಲ್ಲಿ ಸ್ಪಂದಿಸುವಂತೆ ಮುಖ್ಯಾಧಿಕಾರಿ ಸಂಗನಬಸಯ್ಯ ಸರ್ವ ಸದಸ್ಯರಿಗೆ ತಿಳಿಸಿದರು. ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯ ನಿರ್ವಹಣೆ ಇಲ್ಲದ ಕಾರಣ ಉತ್ತಮ ಮಳೆಯಾದರೂ ಜಲಾಶಯಕ್ಕೆ ಸಮರ್ಪಕವಾಗಿ ನೀರು ಹರಿದುಬರುತ್ತಿಲ್ಲ. ಅರಣ್ಯ ಪ್ರದೇಶದಿಂದ ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆಗಳೆಲ್ಲ ಮುಚ್ಚಿ ಹೋಗಿರುವುದರಿಂದ ಮಳೆಗಾಲದಲ್ಲಿ ಕೂಡ ಜಲಾಶಯ ಬರ್ತಿಯಾಗುವ ಲಕ್ಷಣವಿಲ್ಲ. ಹಾಗಾಗಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವಂತೆ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ಪ.ಪಂ ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ ಹಾಗೂ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದರು.
ರಾಜೀವ ಗಾಂಧಿ ಆಶ್ರಯ ಯೋಜನೆಯಡಿಯಲ್ಲಿ ಬ್ಯಾಂಕ್ ನಿಂದ ಸಾಲ ಪಡೆದು ಮನೆ ನಿರ್ಮಿಸಿಕೊಂಡವರಿಗೆ ವರ್ಷ ಕಳೆದರೂ ಬಡ್ಡಿ ಸಹಾಯ ದನ ಜಮಾ ಆಗಿಲ್ಲ ಎಂದು ಪ.ಪಂ ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ ಆಕ್ರೋಶ ವ್ಯಕ್ತಪಡಿಸಿದರು. ಪ.ಪಂ ಅಧ್ಯಕ್ಷ ರಫೀಕ್ ಇನಾಮದಾರ, ಉಪಾಧ್ಯಕ್ಷ ಫಕ್ಕೀರಪ್ಪ ಅಂಟಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಅಲಿಖಾನ ಪಠಾಣ, ಸದಸ್ಯ ಮುನೇಶ ಕೊರವರ, ರಮಾಬಾಯಿ ಕುದಳೆ, ರಾಬರ್ಟ ಲೋಬೊ, ಮಲ್ಲಮ್ಮ ಬೋವಿ, ಸುಶೀಲಾ ಲಮಾಣಿ, ಲತೀಪ ನಾಲಬಂಧ್, ಜ್ಯೋತಿ ಕಲಾಲ, ಮಂಜುನಾಥ ವೆರ್ಣೇಕರ, ರಾಮಣ್ಣ ಪಾಲೇಕರ, ಲಿಂಗರಾಜ ಕನ್ನೂರ, ಕಿರಿಯ ಅಭಿಯಂತರ ಶಂಕರ ದಂಡಿನ್, ಎಸ್ಟಿಲಾ ಬಾಯಿ, ಮಾಂಚಲಾ ಶೇಟ್, ಗೋಣೆಪ್ಪನವರ ಮುಂತಾದವರು ಉಪಸ್ಥಿತರಿದ್ದರು.

loading...