ರಾಜಸ್ತಾನದಲ್ಲಿ ಧಾರಾಕಾರ ಮಳೆ 24 ಮಂದಿ ಬಲಿ

0
29
loading...

ಜೈಪುರ್-ಮರುಭೂಮಿ ರಾಜ್ಯ ರಾಜಸ್ತಾನದಲ್ಲಿ ನಿನ್ನೆ ಇಡೀ ರಾತ್ರಿ ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ 24 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮತಿಸ್ಯ ಪ್ರಾಂತ್ಯದಲ್ಲಿ ಭಾರೀ ರಭಸದ ಮರಳು ಬಿರುಗಾಳಿ ಮತ್ತು ಅದರ ಹಿಂದೆಯೇ ಸುರಿದ ಬಿರುಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು, ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ.

ಇಂದು ನಸುಕಿನ 3 ಗಂಟೆವರೆಗೆ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಭರತ್‍ಪುರ್, ಧೋಲ್‍ಪುರ್, ಅಲ್ವಾರ್ ಮತ್ತು ಜುಜ್ನು ಪ್ರದೇಶಗಳಲ್ಲಿ ಸಾವು-ನೋವು ಸಂಭವಿಸಿದೆ. ಕೆಲವರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ವಿಕೋಪ ನಿರ್ವಹಣೆ ಮತ್ತು ಪರಿಹಾರ ಇಲಾಖೆ ಕಾರ್ಯದರ್ಶಿ ಹೇಮಂತ್ ಕುಮಾರ್ ತಿಳಿಸಿದ್ದಾರೆ. ವಿಕೋಪಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಸಮರೋಪಾದಿಯ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.

ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಪ್ರಕೃತಿ ವಿಕೋಪದಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಟ್ವಿಟರ್‍ನಲ್ಲಿ ಪ್ರಕಟಿಸಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಲ್ಹೋಟ್ ತಮ್ಮ ಜನ್ಮದಿನದ ಸಮಾರಂಭವನ್ನು ರದ್ದುಗೊಳಿಸಿದ್ದಾರೆ. ದುರಂತದ ಬಗ್ಗೆ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

loading...