ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ

0
8
loading...

ಕನ್ನಡಮ್ಮ ಸುದ್ದಿ-ಶಿರಸಿ: ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಮತ್ತೊಮ್ಮೆ ವಚನ ಬ್ರಷ್ಟರಾಗಿದ್ದಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.
ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ರಾಜ್ಯ ಸರಕಾರ ಹಾಗೂ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಮಾತನಾಡಿದ ಕಾಗೇರಿ, ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ರಾಜ್ಯದ ರೈತರಿಗೆ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡು ಇದೀಗ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಇನ್ನೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇದರಿಂದ ರಾಜ್ಯದ ರೈತಾಪಿ ವರ್ಗಕ್ಕೆ ಕುಮಾರಸ್ವಾಮಿ ಮಾಡುತ್ತಿರುವ ಮೋಸ. ಹೀಗಾಗಿ ಕೊಟ್ಟ ಮಾತಿನಂತೆ ಈ ತಕ್ಷಣದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವಾದರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸ್ಪಷ್ಟ ಬಹುಮತ ಇಲ್ಲದ ಕಾರಣ ಸಾಲಮನ್ನಾ ಕಷ್ಟ ಎನ್ನುತ್ತೀರಲ್ಲ ಕುಮಾರಸ್ವಾಮಿಯವರೇ ನಿಮಗೆ ನಾಚಿಕೆಯಿಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಬದಲಾಗಿ ಅಧಿಕಾರ ಇರುವಾಗಲೇ ರೈತರ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದರು. ಕುಂಟು ನೆಪ ಹೇಳಿ ಬೇಜವಾಬ್ದಾರಿಯಾಗಿ ವರ್ತಿಸಿದರೆ ಬಿಜೆಪಿ ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಚುನಾವಣೆ ಮುನ್ನ ನೀವು ನೀಡಿದ ಸಾಲಮನ್ನಾ ಹೇಳಿಕೆ ಈಡೇರಿಸಬೇಕು ಎಂದ ಅವರು, ಇನ್ನಾದರೂ 24 ಗಂಟೆಯೊಳಗೆ ಸಾಲ ಮನ್ನಾ ಮಾಡಿ, ಸೋನಿಯಾ ಗಾಂಧಿಯೆದುರು ಮಂಡಿಯೂರಿ ಅಧಿಕಾರ ಮಾಡುವ ಬದಲು ರೈತರ ಸಾಲ ಮನ್ನಾ ಮಾಡಿ ಜನಪರ ಆಡಳಿತ ನೀಡಿ ಎಂದರು. ಪ್ರತಿಭಟನಾನಿರತರು ಶಿರಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪಕ್ಷದ ಪ್ರಮುಖರಾದ ಆರ್.ವಿ.ಹೆಗಡೆ, ನಾಯ್ಕ, ಆರ್.ಡಿ.ಹೆಗಡೆ, ಶೋಭಾ ನಾಯ್ಕ, ಸಂತೋಷ ಗೌಡರ್, ಸುವರ್ಣ ಸಜ್ಜನ, ವೀಣಾ ಭಟ್ಟ, ವೀಣಾ ಶೆಟ್ಟಿ, ಪವಿತ್ರಾ ಹೊಸೂರು, ಅನೀಸ್ ತಹಶೀಲ್ದಾರ, ನಿರ್ಮಲಾ ಶೆಟ್ಟಿ, ನಾಗರಾಜ ನಾಯ್ಕ, ಸಿಕಂದರ್ ಶುಂಟಿ, ನಾಗರಾಜ ಶೆಟ್ಟಿ, ಗುರುರಾಜ ಹೆಗಡೆ, ರಮಾಕಾಂತ ಭಟ್ಟ, ಹರೀಶ ಪಾಲೇಕರ್, ರವಿ ಹೆಗಡೆ, ಶ್ರೀಕಾಂತ ಹೆಗಡೆ ಹಾಗೂ ಇತರರು ಇದ್ದರು.

loading...