ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಬಂಧನ: ಬಿಡುಗಡೆ

0
16
loading...

ಗಂಗಾವತಿ: ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್‍ಗೆ ಬಿಜೆಪಿ ತನ್ನ ಬೆಂಬಲವನ್ನು ವ್ಯಕ್ತಪಡಿಸಿತ್ತು. ಆದರೆ ಗಂಗಾವತಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ವಿಫಲಗೊಂಡಿದೆ.

ಒತ್ತಾಯ ಪೂರ್ವಕವಾಗಿ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದ ರೈತ ಮುಖಂಡ ತಿಪ್ಪೇರುದ್ರಸ್ವಾಮಿ ವಕೀಲರನ್ನು ಪೊಲೀಸರು ಬಂಧಿಸಿರುವದನ್ನು ವಿರೋಧಿಸಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ನೇತ್ರತ್ವದಲ್ಲಿ ಪಕ್ಷದ ಕಾರ್ಯಕರ್ತರು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಧರಣಿಯನ್ನು ನಡೆಸಿ ಸಮ್ಮಿಶ್ರ ಸರಕಾರಕ್ಕೆ ಧಿಕ್ಕಾರ ಕೂಗಿದರು.
ತಿಪ್ಪೇರುದ್ರಸ್ವಾಮಿಯವರನ್ನು ಬೇಷರತ್ತಾಗಿ ಬಿಡುಗಡೆ ಮಾಡದಿದ್ದರೆ ಧರಣಿಯನ್ನು ಮುಂದುವರೆಸುವದಾಗಿ ಶಾಸಕ ಪರಣ್ಣ ಮುನವಳ್ಳಿ ಎಚ್ಚರಿಕೆಯನ್ನು ನೀಡಿದರು.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪಶೆಟ್ಟಿಯವರ ಸೂಚನೆ ಮೇರೆಗೆ ರೈತ ಮುಖಂಡನನ್ನು ಬಿಡುಗಡೆ ಮಾಡಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಪರಣ್ಣ ಮುನವಳ್ಳಿ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಸತತ ಬರಗಾಲ ಕಂಡು ಬಂದಿದೆ. ಪ್ರಕೃತಿ ವಿಕೋಪಗಳಿಂದ ರೈತರಿಗೆ ಬೆಳೆನಷ್ಟ ಸಂಭವಿಸಿದೆ. ಮಾರುಕಟ್ಟೆಯಲ್ಲಿ ಬೆಲೆಗಳ ಏರುಪೇರಿನಿಂದ ಬೆಳೆಗಳಿಗೆ ಸೂಕ್ತ ದರ ದೊರಕದೆ ರೈತನು ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ಎಂದು ತಿಳಿಸಿದರು.

ಕೃಷಿ ಚಟುವಟಿಕೆಗಳಿಗಾಗಿ ರೈತರು ಸಹಕಾರಿ ಸಂಸ್ಥೆ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದಾರೆ. ಬೆಳೆ ನಷ್ಟದ ಪರಿಣಾಮದಿಂದ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲವನ್ನು ರೈತನು ಭರಿಸಲಾಗದೆ ನೇಣು ಹಾಕಿಕೊಳ್ಳುತ್ತಿದ್ದಾನೆ.
ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಹೇಳಿದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮತಗಳನ್ನು ಪಡೆಯಲು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದರು.

54 ಸಾವಿರ ಕೋಟಿ ಸಾಲ ಇದ್ದು, ಇದನ್ನು ಮನ್ನಾ ಮಾಡದೆ ದಿಟ್ಟ ನಿರ್ಧಾರ ಕೈಕೊಳ್ಳದೆ ರೈತರನ್ನು ವಂಚಿಸಿದ್ದಾರೆ ಎಂದು ಅವರು ತಿಳಿಸಿದರು. ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ, ಎಚ್.ಆರ್.ಚನ್ನಕೇಶವ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ಇತರ ಮುಖಂಡರು ಪಾಲ್ಗೊಂಡಿದ್ದರು.
ಬಂದ್ ಸಂದರ್ಭದಲ್ಲಿ ಕೆಲವು ಕಡೆ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದರೆ ಬಹುತೇಕೆ ಕಡೆಗಳಲ್ಲಿ ಎಂದಿನಂತೆ ವ್ಯವಹಾರ ನಡೆದಿತ್ತು. ಸಾರಿಗೆ ಸಂಸ್ಥೆ ಬಸ್‍ಗಳು ಸಂಚರಿಸಿದವು. ಬ್ಯಾಂಕ್‍ಗಳಲ್ಲಿ ವಹಿವಾಟುಗಳು ನಡೆದವು. ಸಿನಿಮಾ ಮಂದಿರಗಳು ಬಂದ್ ಆಗಿದ್ದರೆ ಬಾರ್ ಮತ್ತು ರೆಷ್ಟೂರೆಂಟ್‍ಗಳು, ಮದ್ಯದ ಅಂಗಡಿಗಳು ತೆರೆದಿದ್ದವು.

loading...