ಶಾಸಕ ಚರಂತಿಮಠಗೆ ಮುಖಂಡರ ಮನೆಗಳಿಗೆ ತೆರಳಿ ಅಭಿನಂದನೆ

0
19
loading...

ಬಾಗಲಕೋಟ: ಬಾಗಲಕೋಟ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರು ಪಕ್ಷದ ಅನೇಕ ಹಿರಿಯ ಮುಖಂಡರ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸಿದರು.
ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಸಹಕಾರಿ ಬ್ಯಾಂಕ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಅನೇಕ ಮುಖಂಡರ ಮನೆಗಳಿಗೆ ಖುದ್ದಾಗಿ ತೆರಳಿ ಗೌರವಿಸಿದರು. ಬಾಗಲಕೋಟ ಕ್ಷೇತ್ರದಲ್ಲಿ ಇತ್ತೀಚಿನ ದಶಕಗಳಲ್ಲಿ ಮೂರು ಸಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿರುವ ವೀರಣ್ಣ ಚರಂತಿಮಠ ಅವರು, ಈ ಸಾರಿ ತಮ್ಮ ಗೆಲುವಿಗೆ ಶ್ರಮಿಸಿದ ನಾಯಕರನ್ನು ಭೇಟಿ ಮಾಡಿ ಅವರನ್ನು ಗೌರವಿಸುವ ಮೂಲಕ ವಿನೂತನ ಪರಂಪರೆಗೆ ನಾಂದಿ ಹಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖಂಡರನ್ನು ಅಭಿನಂದಿಸಲೆಂದು ಶಾಸಕ ವೀರಣ್ಣ ಚರಂತಿಮಠ ಹಾಗೂ ಪಕ್ಷದ ಮುಖಂಡರ ಜೊತೆಗೂಡಿ ತೆರಳಿದ್ದು ಎಲ್ಲರ ಗಮನ ಸೆಳೆಯಿತು. ಮುಖಂಡರ ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದ ಶಾಸಕರು, ಕ್ಷೇತ್ರದ ಸಮಗ್ರ ಅಭಿವೃದ್ದಿ ಪಡಿಸುವ ಹಿನ್ನೆಲೆಯಲ್ಲಿ ಸೂಕ್ತ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನವನ್ನು ಕೋರಿದರು. ಜಿಲ್ಲೆಯಲ್ಲಿ ಬಾಗಲಕೋಟ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿಕೊಂಡು ಕೆಲಸ ಮಾಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪಕ್ಷದ ಮುಖಂಡರ ಜೊತೆಗೆ ಕಾರ್ಯಕರ್ತರು, ಅಭಿಮಾನಿಗಳು, ಮತದಾರ ಪ್ರಭುಗಳು ಕೈ ಜೋಡಿಸುವಂತೆ ಇದೇ ವೇಳೆ ಚರಂತಿಮಠರು ಮನವಿ ಮಾಡಿದರು. ಶಾಸಕರಿಂದ ಅಭಿನಂದನೆ ಪಡೆದ ಪೂಜಾರ, ತಪಶೆಟ್ಟಿ, ಜಿ.ಎನ್.ಪಾಟೀಲ ಹಾಗೂ ಭಾಂಡಗೆ ಅವರು ಪ್ರತಿಯಾಗಿ ಶಾಸಕರನ್ನು ಅಭಿನಂದಿಸಿ, ಪಕ್ಷದ ದಾಖಲೆ ಗೆಲುವಿಗೆ ತೀವ್ರ ಹರ್ಷ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಿಕೊಂಡು ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಾ.ಶೇಖರ ಮಾನೆ, ಸತ್ಯನಾರಾಯಣ ಹೇಮಾದ್ರಿ, ಚಂದ್ರಕಾಂತ ಕೇಸನೂರ, ತಿಮ್ಮಣ್ಣ ಗೌಡರ, ಸಂಗಣ್ಣ ಕಲಾದಗಿ, ಸಂಗಮೇಶ ಹಿತ್ತಲಮನಿ, ಅನೀಲ ತುಪ್ಪದ, ಸಂಗನಗೌಡ ಗೌಡರ, ಮನೋಹರ ಏಳಮ್ಮಿ, ಮಹೇಶ ಅಥಣಿ, ರಮೇಶ ಮೋರಟಗಿ, ಕೇಶವ ಭಜಂತ್ರಿ, ಹಣಮಂತ ನಾರಾಯಣಿ ಮತ್ತಿತರರು ಇದ್ದರು.

loading...