ಶಾಸಕ ಸವದಿಯಿಂದ ಬಾಗಿನ ಅರ್ಪಣೆ

0
16
loading...

ಕನ್ನಡಮ್ಮ ಸುದ್ದಿ-ರಬಕವಿ-ಬನಹಟ್ಟಿ: ಕಳೆದ 15 ದಿನಗಳಿಂದ ಸಮೀಪದ ಮಹಿಷವಾಡಗಿ ಬ್ಯಾರೇಜ್ ಬತ್ತಿ ಹೋಗಿದ್ದ ಕಾರಣ ಮಹಾರಾಷ್ಟ್ರದ ದೂದಗಂಗಾ ಹಾಗು ವೇದಗಂಗಾದಿಂದ ಬಿಟ್ಟ ನೀರು ಇಲ್ಲಿಗೆ ಆಗಮಿಸಿದ್ದ ಕಾರಣ ನೂತನ ಶಾಸಕ ಸಿದ್ದು ಸವದಿ ಕ್ಷೇತ್ರದ ಪ್ರಪ್ರಥಮ ಕಾರ್ಯವನ್ನಾಗಿ ಶನಿವಾರ ಸಂಜೆ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ಇದೇ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ 10 ವರ್ಷಗಳ ಕಾಲ ಶಾಸಕನಾದ ಅನುಭವ ನನಗಿದ್ದು, ತೇರದಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು. ರಬಕವಿ-ಬನಹಟ್ಟಿ ನೂತನ ತಾಲೂಕಾಗಿದ್ದು, ಸದ್ಯ ಬೇಕಾಗುವ ಎಲ್ಲ ಕಛೇರಿಗಳು ಸಂಪೂರ್ಣ ಅವಧಿಗೆ ಕಾರ್ಯನಿರ್ವಹಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಸಮುದಾಯ ಆಸ್ಪತ್ರೆಗಳಿಗೆ ಮೊದಲ ಆದ್ಯತೆ ನೀಡಿ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ವಿಸ್ತರಿಸುವದರ ಜೊತೆಗೆ ತೇರದಾಳ ಹಾಗು ಮಹಾಲಿಂಗಪೂರ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೂ ಯೋಗ್ಯ ಅನುದಾನಗಳಿಂದ ಅಭಿವೃದ್ಧಿಪಡಿಸಲಾಗುವದೆಂದು ತಿಳಿಸಿದರು.

ಚುನಾವಣೆ ಗಿಮಿಕ್: ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಚುನಾವಣೆ ಗಿಮಿಕ್ ಸಲುವಾಗಿ ಆಗಿನ ಸರ್ಕಾರ ತರಾತುರಿಯಲ್ಲಿ ರಬಕವಿ-ಮಹಿಷವಾಡಗಿ ಹಾಗು ಢವಳೇಶ್ವರ ಸೇತುವೆಗೆ ಸಂಬಂಧ ಯಾವದೇ ಯೋಜನೆ ರೂಪಿಸದೆ ಶಂಕು ಸ್ಥಾಪನೆ ನಿರ್ವಹಿಸಿದ್ದನ್ನು ಮತ್ತೊಮ್ಮೆ ಪರಿಶೀಲಿಸಲಾಗುವದು. ಅಲ್ಲದೆ ಸಸಾಲಟ್ಟಿ ಏತ ನೀರಾವರಿಗೆ 140 ಕೋಟಿ ರೂ.ಗಳಷ್ಟು ಹಣ ಮೀಸಲಿಡಲು ಎಲ್ಲ ರೀತಿಯಲ್ಲಿ ಪ್ರಸ್ತಾವಣೆ ಮೂಲಕ ಮತ್ತೊಮ್ಮೆ ಪರಿಶೀಲಿಸಿ, ಎಲ್ಲದಕ್ಕೂ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು. ಇದೇ ಸಂದರ್ಭ ರಾಜು ಅಂಬಲಿ, ದುಂಡಪ್ಪ ಮಾಚಕನೂರ, ಸುರೇಶ ಕೋಲಾರ, ಸುರೇಶ ಚಿಂಡಕ, ರಾಮಣ್ಣ ಹುಲಕುಂದ, ಧರೆಪ್ಪ ಉಳ್ಳಾಗಡ್ಡಿ, ಗೋವಿಂದ ಡಾಗಾ, ಸುನಿತಾ ನಂದಗೊಂಡ, ಈಶ್ವರ ಕಾಡದೇವರ, ಶಿವಾನಂದ ಕಾಗಿ, ವೈಷ್ಣವಿ ಬಾಗೇವಾಡಿ, ಮಾಜಿ ನಗರಾಧ್ಯಕ್ಷರಾದ ಕನೆಪ್ಪ ಹಾರುಗೇರಿ, ಅನುರಾಧಾ ಹೊರಟ್ಟಿ, ಸವಿತಾ ಹೊಸೂರ, ಖಾನಾಪುರ, ಸುರೇಶ ಆರಿ, ರಾಜು ಬುದ್ನಿ ಸೇರಿದಂತೆ ಅನೇಕರಿದ್ದರು.

loading...