ಶ್ರಮಿಕರ ಪರಿಶ್ರಮವನ್ನು ಗುರುತಿಸುವ ಮನಸ್ಸು ನಮ್ಮದಾಗಬೇಕು: ನ್ಯಾ. ಚೆನ್ನಕೇಶವ

0
15
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ದೇಶ ಕಟ್ಟುವ ಕಾರ್ಯದಲ್ಲಿ ಕಾರ್ಮಿಕರ ಮತ್ತು ಶ್ರಮಿಕರ ಪರಿಶ್ರಮವನ್ನು ಗುರುತಿಸುವ ಮನಸ್ಸು ನಮ್ಮದಾಗಬೇಕು. ಅಂದಾಗ ಮಾತ್ರ ಅವರಿಗಾಗಿ ರಚಿತವಾದ ಕಾನೂನುಗಳ ಸದ್ವಿನಿಯೋಗ ಆಗುತ್ತದೆ ಎಂದು ಹೊನ್ನಾವರ ಸಿವಿಲ್ ಜಜ್ಜ ಹಿರಿಯ ವಿಭಾಗ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸೇಂಟ್ ಇಗ್ನೇಷಿಯಸ್ ಸಮೂಹ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಮಿಕ ವರ್ಗವನ್ನು ಶೋಷಣೆ ಮುಕ್ತಗೊಳಸಿ ಅವರೂ ಸಹ ಎಲ್ಲರಂತೆ ಆರೋಗ್ಯ, ಶಿಕ್ಷಣ, ಬದುಕು ಕಂಡುಕೊಳ್ಳಲಿ ಎಂಬ ಉದ್ದೇಶಗಳಿಂದ ಹಲವಾರು ಕಾನೂನುಗಳು ರಚನೆಗೊಂಡಿದೆ. ಮಹಿಳೆಯರ, ಮಕ್ಕಳ ಹಿತಕ್ಕಾಗಿ ಅವರನ್ನು ಅಪಾಯಕರ ಉದ್ಯೋಗದಿಂದ ದೂರವಿಡುವ ಕಾನೂನುಗಳಿವೆ. ಅವುಗಳ ಪಾಲನೆಗೆ ಸಮಾಜ ಮುಂದಾಗಬೇಕು. ಅವರು ದೇಶದ ಆಸ್ತಿಯಾಗಿದ್ದು, ಅಪಾಯಕಾರಿ ಪರಿಸರದಲ್ಲಿ ಅವರನ್ನು ದುಡಿಸಿಕೊಂಡರೆ ದೇಶದ ಪ್ರಗತಿಗೆ ಮಾರಕ ಎಂದರು. ಹೆಚ್ಚುವರಿ ನ್ಯಾಯಾಧೀಶೆ ಸನ್ಮತಿ ಎಸ್.ಆರ್. ಮಾತನಾಡಿ ಕಾರ್ಮಿಕರ ಮಹತ್ವವನ್ನು ಅರಿತು ಅವರು ಉಳಿದವರಂತೆ ಬದುಕುವ ಅವರ ಹಿತಕಾಯಲು ವಿಶ್ವಮಟ್ಟದಲ್ಲಿ ರಚನೆಗೊಂಡ ನೂರಾರು ದೇಶಗಳ ನಡುವಿನ ಒಡಂಬಡಿಕೆಯ ಪರಿಣಾಮವಾಗಿ ದೇಶದ ಕಾರ್ಮಿಕ ಕಾನೂನು ಸಂವಿಧಾನದ ಅಡಿಯಲ್ಲಿ ಸುವ್ಯವಸ್ಥಿತವಾಗಿ ರೂಪಗೊಂಡಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ಕಾರ್ಮಿಕರದ್ದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ನ್ಯಾಯವಾದಿ ಮಾಧವ ಜಾಲಿಸತ್ಗಿ, ವಿ.ಎಂ. ಭಂಡಾರಿ, ಇನ್ನೀತರರು ಉಪಸ್ಥಿತರಿದ್ದರು. ವಕೀಲೆ ಉಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಿಸ್ಟರ್ ಲೀನಾ ವಂದಿಸಿದರು.

loading...