ಸಮಾಜವು ಕಾಲಕಾಲಕ್ಕೆ ದೋಷ ದೌರ್ಬಲ್ಯ ಸರಿಪಡಿಸಿಕೊಳ್ಳುವುದು ಅವಶ್ಯ: ಶ್ರೀಗಳು

0
37
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ನಮ್ಮತನದ ಬಗ್ಗೆಯೇ ನಮಗೆ ತಾತ್ಸಾರ ಭಾವನೆ ಹುಟ್ಟುವುದು ವಿಚಿತ್ರವಾದ ಸ್ಥಿತಿಯಾಗಿದ್ದು ಇದರಿಂದ ಹೊರಬರಲು ಪ್ರಯತ್ನಿಸಬೇಕೆಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.

ಅವರು ಮಂಗಳವಾರ ತಾಲೂಕಿನ ಕಳಚೆಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಭಾಗೃಹದಲ್ಲಿ ಚಿನ್ನಾಪುರ ಸೀಮಾ ಸಮಾವೇಶದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಹವ್ಯಕ ಜಾಗೃತಿ ಕಾರ್ಯಪಡೆ, ಚಿನ್ನಾಪುರ ಸೀಮಾ ಪರಿಷತ್, ಮಾತೃ ಮಂಡಳ ಮತ್ತು ವೈದಿಕ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾವುದೇ ಸಮಾಜವು ಕಾಲಕಾಲಕ್ಕೆ ತನ್ನೊಳಗಿನ ದೋಷ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುತ್ತ ತನ್ನ ಅಸ್ತಿತ್ವದ ಮೂಲೋದ್ದೇಶವನ್ನು ನಿರಂತರವಾಗಿ ಸಾಧಿಸುತ್ತಸಾಗುವುದು ಅತಿ ಅವಶ್ಯ. ಸಂಸ್ಕಾರ ವೈಪರೀತ್ಯಗಳಿಂದ ಅಪಾಯ ಹೆಚ್ಚು. ನಮ್ಮ ಧರ್ಮದ ಬಗ್ಗೆ ತಾತ್ಸಾರ ಭಾವನೆಯನ್ನು ಬಿಟ್ಟು ಧರ್ಮಾಚರಣೆಯ ಬಗ್ಗೆ ಗಮನ ನೀಡಿದರೆ ಸಂತೃಪ್ತ ಜೀವನ ನಮಗೆ ಲಭಿಸುತ್ತದೆ. ಶುದ್ದ ಗಾಳಿ, ಬೆಳಕು, ಪರಿಸರ ವಿರುವ ಹಳ್ಳಿಗಳೇ ಧರ್ಮಾಚರಣೆಗೆ ಯೋಗ್ಯವಾಗಿದ್ದು, ಕಲುಷಿತಗೊಂಡಿರುವ ನಗರ ಜೀವನದ ಬಗ್ಗೆ ಮೋಹ ಸಲ್ಲದೆಂದರು.
ಕಾರ್ಯಕ್ರಮವನ್ನು ಚಿನ್ನಾಪುರ ಮೇಲ್ತರ್ಪ ಸೀಮಾಧ್ಯಕ್ಷ ದತ್ತಾತ್ರಯ ಹೆಗಡೆ ಕಣ್ಣಿಪಾಲ ಉದ್ಘಾಟಿಸಿದರು. ಕೆಳತರ್ಪ ಸೀಮಾಧ್ಯಕ್ಷ ನಾಗರಾಜ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ಕಾರ್ಯಪಡೆಯ ಸದಸ್ಯ ತಿಮ್ಮಣ್ಣ ಭಟ್ಟ ನಡಿಗೆಮನೆ, ಉಮೇಶ ಭಾಗ್ವತ, ಶ್ರೀಮಠದ ಆಡಳಿತ ಸಮಿತಿ ಸದಸ್ಯ ವೆಂಕಟರಮಣ ಬೆಳ್ಳಿ ಉಪಸ್ಥಿತರಿದ್ದರು. ಹವ್ಯಕ ಜಾಗೃತಿ ಕಾರ್ಯಪಡೆ ಸಂಚಾಲಕ ನಾರಾಯಣ ಹೆಗಡೆ ಬೀಗಾರ ಸ್ವಾಗತಿಸಿ, ನಿರ್ವಹಿಸಿದರು. ಸೀಮಾ ಸಂಚಾಲಕ ಮಹೇಶ ಗಾಂವ್ಕರ ವಂದಿಸಿದರು. ನಂತರ ನಡೆದ ವಿವಿಧ ಗೋಷ್ಟಿಗಳಲ್ಲಿ ಸಚ್ಚಿದಾನಂದ ಹೆಗಡೆ ವಿದ್ವಾನ್ ಅನಂತ ಮೂರ್ತಿ ಭಟ್ಟ ಮೊದಲಾದ ವಿದ್ವಾಂಸರು ಮಾರ್ಗದರ್ಶನ ನೀಡಿದರು.

loading...