ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳ ಕಣಜವಾಗಿದೆ: ಶಂಕರ

0
15
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಶಂಕರಾಚಾರ್ಯರ ಪರಂಪರೆಯನ್ನು ಅನುಸರಿಸುತ್ತಿರುವ ನಾವು, ಹಿರಿಯರು ಹಾಕಿಕೊಟ್ಟ ಶ್ರೇಷ್ಟ ಸಂಸ್ಕಾರ-ಸಂಸ್ಕøತಿಗಳ ಬಲದಿಂದ ಸನ್ಮಾರ್ಗದಲ್ಲಿ ನಡೆಯುವಂತಾಗಿದ್ದು, ದೇಶದೆಲ್ಲೆಡೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಇಂತಹ ಸತ್ಪರಂಪರೆಯ ಕುರಿತು ನಮ್ಮ ಮಕ್ಕಳಿಗೂ ಕಲಿಸಬೇಕಾದ ಮಹತ್ವದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾ 2017-18 ರ ಸಾಲಿನ ವಿದ್ಯಾರ್ಥಿ ವೇತನ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ದೇಶದ ಭವ್ಯ ಪರಂಪರೆಯ, ಶ್ರೇಷ್ಟತೆಗೆ ಕಾರಣರಾದ ಶ್ರೇಷ್ಟ ವಿಜ್ಞಾನಿಗಳನ್ನು, ವಿದ್ವಾಂಸರನ್ನು ನೀಡಿದ ಸಮಾಜ ನಮ್ಮದಾಗಿದ್ದು, ವೇದ, ಉಪನಿಷತ್, ಸಂಸ್ಕøತಗಳನ್ನು ಅಧ್ಯಯನ ಮಾಡಿ, ಪಾಂಡಿತ್ಯ ಹೊಂದಿದ ಆದರ್ಶ ಸಮಾಜವಾಗಿದೆ. ಇಂತಹ ಸಮಾಜದಲ್ಲಿನ ನಮ್ಮ ಯುವಕರು ತಮ್ಮತನ ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾಸಭೆ ಅನೇಕ ವರ್ಷಗಳಿಂದ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ, ಸಮಾಜದಲ್ಲಿನ ಬಡವರಿಗೆ ಪ್ರೋತ್ಸಾಹ, ಸಹಕಾರ ನೀಡುತ್ತ ಬಂದಿದೆ. ನಮ್ಮ ಸಂಘಟನೆ ಈ ನಿಟ್ಟಿನಲ್ಲಿ ಮತ್ತಷ್ಟು ಬಲಗೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ನಮ್ಮ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳ ಕಣಜವಾಗಿದೆ. ಪ್ರತಿಭಾವಂತರಾಗಲು ಆನುವಂಶಿಕತೆ ಮತ್ತು ಪಾಲಕರ ತೀವ್ರ ಪ್ರಯತ್ನದಿಂದಾಗಿ ಮಾತ್ರ ಸಾಧ್ಯ. ಇಂತಹ ಪ್ರತಿಭಾವಂತ ಮಕ್ಕಳಿಗೆ ಸನ್ಮಾರ್ಗದ ದಾರಿ ತೋರಿಸಬೇಕಾಗಿದೆ. ಸಂಪತ್ತು ಶಾಶ್ವತ ಅಲ್ಲ. ಆದರೆ ನಮಗೆ ನಮ್ಮ ಮಕ್ಕಳೇ ವಿಶೇಷ ಸಂಪತ್ತು ಎಂಬುದನ್ನು ಯಾರೂ ಮರೆಯುವಂತಿಲ್ಲ. ಎಂದ ಅವರು, ತಾಲೂಕಿನ ಹವ್ಯಕ ಸಂಘಟನೆಯನ್ನು ಬಲಗೊಳಿಸಬೇಕಿದೆ. ಅಲ್ಲದೇ, ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಸ್ಥಾಪಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಅದಕ್ಕೆ ತಾಲೂಕಿನ ಎಲ್ಲ ಹವ್ಯಕ ಬಂಧುಗಳ ಸಹಕಾರ ಅಗತ್ಯವಾಗಿದೆ. ಎಂದರು.
ಅಖಿಲ ಹವ್ಯಕ ಮಹಾಸಭಾ ಗೌ.ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಮಾತನಾಡಿ, ಹವ್ಯಕ ಮಹಾಸಭೆ 75 ವಸಂತಗಳನ್ನು ಕಳೆದು 3 ನೆಯ ವಿಶ್ವ ಮಹಾ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.28, 29, 30 ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದೆ. ಕನಿಷ್ಟ ಒಂದು ಲಕ್ಷ ಹವ್ಯಕರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ವಿಶ್ವಾದ್ಯಂತ 5.5 ಲಕ್ಷ ಹವ್ಯಕರಿದ್ದಾರೆ. ನಮ್ಮ ಹಿರಿಯರು ಈ ದಿಸೆಯಲ್ಲಿ ನಮ್ಮ ಸಂಘಟನೆಯನ್ನು ಬೆಂಗಳೂರಿನಲ್ಲಿ ಕೇಂದ್ರಿತವಾಗಿ ಸ್ಥಾಪಿಸಿ, ಸಮಾಜದ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಆರ್ತ ನಿಧಿಯಿಂದ ಬಡವರಿಗೆ ಸಹಾಯ. ವಿದ್ಯಾರ್ಥಿ ವೇತನ ಹೀಗೆ ಹತ್ತು ಹಲುವು ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಇಂದು ತಾಲೂಕಿನ 98 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸುತ್ತಿದ್ದೇವೆ. ಅಲ್ಲದೇ ವಿಶ್ವ ಸಮ್ಮೇಳನಕ್ಕೂ ಮುನ್ನ 1 ಲಕ್ಷ ಹವ್ಯಕರನ್ನು ಸದಸ್ಯರನ್ನಾಗಿಸುವ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಯ ಹವ್ಯಕರು ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಮಹಾ ಸಭಾ ನಿರ್ದೇಶಕ ಆರ್.ಜಿ.ಹೆಗಡೆ ಹೊನ್ನಾವರ, ಪ್ರಶಾಂತ ಹೆಗಡೆ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್, ಟಿ.ಎಂ.ಎಸ್ ವ್ಯವಸ್ಥಾಪಕ ಸಿ.ಎಸ್.ಹೆಗಡೆ, ಪತ್ರಕರ್ತ ಜಿ.ಎನ್.ಭಟ್ಟ ವೇದಿಕೆಯಲ್ಲಿದ್ದರು. ಟಿ.ಎನ್.ಭಟ್ಟ ನಡಿಗೆಮನೆ ಸ್ವಾಗತಿಸಿದರು. ಕೆ.ಎಸ್.ಭಟ್ಟ ನಿರ್ವಹಿಸಿ, ವಂದಿಸಿದರು.

loading...