ಸಮ್ಮಿಶ್ರ ಸರ್ಕಾರ ರಚನೆಯಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ

0
24
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಮುಖ್ಯಮಂತ್ರಿಯಾಗಿ ಮೂರು ದಿನ ಇದ್ದು ಬಹುಮತ ಸಾಬೀತುಪಡಿಸಲಾಗದಿರುವ ಕಾರಣ ತಮ್ಮ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿರುವದರಿಂದ ಹಳಿಯಾಳದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರೆ ಮೊನ್ನೆಯಷ್ಟೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ದಿನ ಪಟಾಕಿ ಸಿಡಿಸಿ ಸಿಹಿ ಹಂಚಿದ ಭಾಜಪ ಕಾರ್ಯಕರ್ತರಲ್ಲಿ ವಿಷಾದ ಮನೆ ಮಾಡಿದೆ.
ಕಾಂಗ್ರೆಸ್:- ರಾಜ್ಯದ ಹಿರಿಯ ಮುಖಂಡರಾದ ಆರ್.ವಿ. ದೇಶಪಾಂಡೆಯವರು ಕ್ಷೇತ್ರದ ಶಾಸಕರಾಗಿ ಪುನರಾಯ್ಕೆಗೊಂಡಿದ್ದು, ಅವರನ್ನು ರಾಜ್ಯದ ಹಿರಿಯ ಸಚಿವರೆಂದು ಅಭಿಮಾನಪಡುತ್ತಿದ್ದ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಭಾಜಪ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ ಸ್ವಲ್ಪ ಕಸಿವಿಸಿ ಕಂಡಿದ್ದರು. ಆದರೆ ಮತ್ತೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ತಮ್ಮ ನಾಯಕರಾದ ದೇಶಪಾಂಡೆಯವರು ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಹುದ್ದೆ ಹೊಂದುವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಹಾಗೂ ಪಟ್ಟಣದ ಇತರೆಡೆ ಪಟಾಕಿ ಸಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು ವಿಜಯದ ಸಂಕೇತ ತೋರಿಸಿದರು. ಪಕ್ಷದ ಪ್ರಮುಖರಾದ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲ ಚವ್ಹಾಣ, ಪುರಸಭೆ ಸದಸ್ಯರಾದ ಸತ್ಯಜೀತ ಗಿರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ, ಉಮೇಶ ಬೋಳಶೆಟ್ಟಿ, ಫಯಾಜ್ ಶೇಖ, ಗುಲಾಬಶ್ಯಾ ಲತೀಫನವರ, ಮುಖಂಡರಾದ ಸಂಜು ಮಿಶ್ಯಾಳಿ, ಬಾಬು ಪಾಗೋಜಿ, ರೋಹನ ಬೃಗಾಂಜಾ, ಬಸ್ತ್ಯಾಂವ ಸಿದ್ಧಿ ಮೊದಲಾದವರು ಪಾಲ್ಗೊಂಡಿದ್ದರು.
ಜೆಡಿಎಸ್:- ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿರುವುದರಿಂದ ಜಾತ್ಯಾತೀತ ಜನತಾದಳ ಪಕ್ಷದ ಸ್ಥಳೀಯ ಪ್ರಮುಖರು ಸಹ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ನೇತೃತ್ವದಲ್ಲಿ ಪ್ರಮುಖರಾದ ಯಲ್ಲಪ್ಪಾ ಹೊನ್ನೋಜಿ, ಸುಬಾನಿ ಹುಬ್ಬಳ್ಳಿ, ಅಣ್ಣಪ್ಪಾ ವಡ್ಡರ್, ರಮೇಶ ಪೂಜಾರಿ ಮೊದಲಾದವರಿದ್ದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದಂತೆ ಈಗಲೂ ಹೆಚ್ಚಿನ ಜನಪರ ಕಾರ್ಯಗಳನ್ನು ಮಾಡಲಿದ್ದಾರೆ. ಸರ್ವ ಜನರ ಸರ್ವಾಂಗೀಣ ಒಳಿತಿಗಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ಹಳಿಯಾಳ ಕ್ಷೇತ್ರದ ರೈತರು, ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿಗಳು, ಹಿಂದುಳಿದವರು, ದೈಹಿಕ ಹಾಗೂ ವಯಸ್ಸಿನ ಕಾರಣ ತೊಂದರೆಯಲ್ಲಿರುವವರು ಮೊದಲಾದವರಿಗೆ ಸರ್ಕಾರದ ವತಿಯಿಂದ ಸಿಗುವ ಯೋಜನೆಗಳನ್ನು ದೊರಕಿಸಿಕೊಡಲು, ನೀರಾವರಿ ಯೋಜನೆ, ಹಳಿಯಾಳ ತಾಲೂಕು ಮಾತ್ರವಲ್ಲದೇ ಜೋಯಿಡಾ ತಾಲೂಕಿನ ಹಳ್ಳಿಗಳ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ, ಹಿಂದುಳಿದ ಗೌಳಿ, ಕುಣಬಿ ಜನಾಂಗ ಹಾಗೂ ಮರಾಠಾ ಸಮುದಾಯಕ್ಕೆ ಸಿಗಬೇಕಾದ ನ್ಯಾಯ, ದಲಿತರು, ಹಿಂದುಳಿದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖಂಡರಾದ ಕೆ.ಆರ್. ರಮೇಶ್ ತಿಳಿಸಿದ್ದಾರೆ.

loading...