ಸಸ್ಯ ಸಂರಕ್ಷಣೆಯ ಮಾಹಿತಿ ನೀಡಲು ಶಾಸಕ ಪಾಟೀಲ ಸೂಚನೆ

0
15
loading...

ನರಗುಂದ: ಪರಿಸರಕ್ಕಾಗಿ ಹೆಚ್ಚಿನ ಜವಾಬ್ದಾರಿ ಇದೆ. ಸಸ್ಯ ಸಂರಕ್ಷಣೆ ಕುರಿತು ಸರಿಯಾದ ಮಾಹಿತಿಯನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ವಿವರ ನೀಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಅರಣ್ಯ ಇಲಾಖೆ ಅಧಿಕಾರಿ ಡಬಾಲಿಯವರಿಗೆ ಸೂಚಿಸಿದರು.

ಪಟ್ಟಣದ ತಾಪಂ ಭವನದಲ್ಲಿ ಬುಧವಾರ ಶಾಸಕ ಸಿ.ಸಿ. ಪಾಟೀಲ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ವರದಿ ಕುರಿತು ಮಾಹಿತಿ ಸಂಗ್ರಹಿಸಿ ಅಧಿಕಾರಿಗಳ ಜೊತೆ ಮಾತನಾಡಿ, ಸಸ್ಯ ಸಂರಕ್ಷಣೆ ಕುರಿತು ತಾಲೂಕಿನ ಯಾವ, ಯಾವ ಕಡೆಗಳಲ್ಲಿ ಇದುವರೆಗೆ ಪ್ಲಾಂಟೇಷನ್ ಮಾಡಿದ್ದೀರಿ ಎನ್ನುವುದರ ಕುರಿತು ನನಗೆ ಸಂಪೂರ್ಣ ಮಾಹಿತಿ ನೀಡಲು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಕೋರಿದರು.
ತೋಟಗಾರಿಕೆ ಇಲಾಖೆಯಿಂದ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನಡೆಯಬೇಕೆಂದು ಸೂಚಿಸಿದ ಪಾಟೀಲ ಈ ಕುರಿತು ಮಾಹಿತಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲಿ ಕೋರಿದರು. ಈ ಕುರಿತು ವಿವರ ನೀಡಿದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಎಸ್. ಆನಂದ ವಿವರಿಸಿ, ಕಳೆದ ವರ್ಷ ಹನಿ ನಿರಾವರಿಗಾಗಿ 20 ರೈತ ಫಲಾನುಭವಿಗಳಿಗೆ 90 ಲಕ್ಷರೂ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕರು ಮುಂದಿನ ಸಭೆಯಲ್ಲಿ ಸಂಪೂರ್ಣಮಾಹಿತಿ ನೀಡುವಂತೆ ಸೂಚಿಸಿದರು.

ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 1300 ಮಕ್ಕಳು ಸರ್ಕಾರದ ಯೋಜನೆಯಿಂದ ಒದಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗನಗೌಡ ಪಾಟೀಲ ತಿಳಿಸಿ, ಅಪೌಷ್ಟಿಕ ಮಕ್ಕಳಿಗೆ ನಿಗಧಿತ ಅವಧಿಗಳಲ್ಲಿ ಮೊಟ್ಟೆ ವಿತರಣೆ ಮತ್ತು ಅವರ ಆರೋಗ್ಯದ ಕಡೆಗೆ ಗಮನಹರಿಸಿ ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಭಾಗ್ಯ ಲಕ್ಷೀ ಯೋಜನೆ ಬಾಂಡ್ ವಿತರಣೆ ಕುರಿತು 2006-07 ರಲ್ಲಿ ಮಾತ್ರ ತೊಂದರೆಯಾಗಿತ್ತು. ಆದರೆ ಸಧ್ಯದ ಸ್ಥಿತಿಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ನಿಗಧಿತ ಅವಧಿಯಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ರೇಷ್ಮೆಇಲಾಖೆಯಿಂದ ವಿವಿಧ ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದ ರೇಷ್ಮೆ ಇಲಾಖೆ ಅಧಿಕಾರಿ ಎಸ್.ಎಫ್. ದಾನಪ್ಪಗೌಡ್ರ, ನರಗುಂದ ತಾಲೂಕ ಮತಕ್ಷೇತ್ರದ ಹುಯಿಲಗೋಳ ಮತ್ತು ಕಿರಟಗೇರಿ ಭಾಗದಲ್ಲಿ ರೇಷ್ಮೆ ಸಾಕಾಣಿಕೆಗೆ ರೈತರು ಹೆಚ್ಚಿನ ಒಲವು ಹೊಂದಿದ್ದಾರೆ. ತಾಲೂಕಿ ಮತಕ್ಷೇತ್ರದ ಆರು ಗ್ರಾಮಗಳಲ್ಲಿ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕಿನಲ್ಲಿಯ ರೈತರು 68.21 ಹೆಕ್ಟೆರ್ ಪ್ರದೇಶದಲ್ಲಿ ರೇಷ್ಮೆ ಸಾಕಾಣಿಕೆ ಉಧ್ಯೋಗ ಕೈಗೊಂಡಿದ್ದಾರೆಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಹೆಚ್ಚಿನ ಕ್ರಮಕೈಗೊಳ್ಳಬೇಕು. ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೆರೆಗಳನ್ನು ಸರಿಯಾಗಿ ಭರ್ತಿಗೊಳಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ನೀರಾವರಿ ಅಧಿಕಾರಿಗಳಲ್ಲಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ನೀರಾವರಿ ಕಾಲುವೆಗಳ ದುರಸ್ತಿ ಸರಿಯಾಗಿ ಮಾಡುವ ಕಾರ್ಯ ನೀರಾವರಿ ಇಲಾಖೆಯಿಂದ ನಡೆಯಬೇಕು. ಕೊಣ್ಣೂರ ಏತ ನೀರಾವರಿ ಯೋಜನೆಗಾಗಿ ಅಲ್ಲಿ ವಿದ್ಯುತ್ ಸಂಪರ್ಕ ಅಳವಡಿಕೆ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅದನ್ನು ತಕ್ಷಣ ಪರಿಹರಿಸಿ ಎಂದು ಶಾಸಕರು, ಅಧಿಕಾರಿಗಳಿಗೆ ಸೂಚಿಸಿದರು.
ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಪ್ರಗತಿ ವರದಿ ವಾಚಿಸುವ ಸಂದರ್ಭದಲ್ಲಿ ಮೈಕ್‍ಗಳು ಸರಿಯಾಗಿ ಇರದ್ದರಿಂದ ಅಧಿಕಾರಿಗಳು ನೀಡುತಿದ್ದ ಉತ್ತರ ಸರಿಯಾಗಿ ಕೇಳದ ಪರಿಣಾಮ, ಶಾಸಕರು ಸಿಡಿಮಿಡಿಗೊಂಡು ಮುಂದಿನ ಸಭೆ ನಡೆದ ಸಂದರ್ಭದಲ್ಲಿ ಉತ್ತಮ ಮೈಕಗಳನ್ನು ಹಾಕಿಸಲು ತಾಪಂ ಇಒ ಅವರಿಗೆ ಸೂಚಿಸಿದರು.

ಶಾಸಕ ಸಿ.ಸಿ. ಪಾಟೀಲ ಅವರು ಪ್ರಥಮ ಸಾಮಾನ್ಯ ಸಭೆಯ ನಡೆಸಿದ ಹಿನ್ನಲೆಯಲ್ಲಿ ಮತ್ತು ಶಾಸಕರಾಗಿ ಆಯ್ಕೆಗೊಂಡ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಹೂಮಾಲೆ ಹಾಕಿ ಶಾಸಕರನ್ನು ಸನ್ಮಾನಿಸಿದರು.
ತಾಪಂ ಪ್ರಭಾರಿ ಇಒ ಎಂ.ವ್ಹಿ. ಚಳಗೇರಿ, ಡಿವೈಎಸ್‍ಪಿ ಶಂಕರಗೌಡ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಚಂದ್ರು ದಂಡಿನ, ಬಿಜೆಪಿ ಹಿರಿಯ ಮುಖಂಡ ಶಿವನಗೌಡ ಹೆಬ್ಬಳ್ಳಿ, ತಹಸೀಲ್ದಾರ ಆರ್.ವ್ಹಿ. ಕಟ್ಟಿ, ಎಂ.ಎಸ್. ಪಾಟೀಲ, ರೋಣ ತಾಪಂ ಇಒ ಪ್ರಭು ವಾಲಿ, ಗದಗ ತಾಪಂ ಇಒ ಎಚ್.ಎಸ್. ಜಿಣಗಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

loading...