ಸಾಲಮನ್ನಾಕ್ಕಾಗಿ ರಾಜ್ಯ ಬಂದ್: ನಗರದಲ್ಲಿ ಮಿಶ್ರಪ್ರತಿಕ್ರಿಯೆ

0
18
loading...

ನರಗುಂದ: ಸಾಲಮನ್ನಾಕ್ಕಾಗಿ ಆಗ್ರಹಿಸಿ ಸೋಮವಾರ ರಾಜ್ಯ ಬಿಜೆಪಿ ಬಂದ್ ಕರೆಕೊಟ್ಟ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಗೊಂಡಿತು. ಮಾರುಕಟ್ಟೆಯಲ್ಲಿ ಅನೇಕ ಮಾಲೀಕರು ಅಂಗಡಿ ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರೆ ಅನೇಕ ಅಂಗಡಿ ಮಾಲೀಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂದಿತು. ಬಸ್ ಸಂಚಾರ ಎಂದಿನಂತೆ ಮುಂದುವರೆಯಿತು. ಬ್ಯಾಂಕ್‍ಗಳು ಎಂದಿನಂತೆ ವಹಿವಾಟು ನಡೆಸಿದವು. ಶಾಲಾ ಆರಂಭೋತ್ಸವಕ್ಕಾಗಿ ಶಾಲಾ ದಾಖಲಾತಿ ಅಂದೋಲನದ ರ್ಯಾಲಿಯನ್ನು ಆಯಾ ಶಾಲಾ ಶಿಕ್ಷಕರು ಮಕ್ಕಳ ಜೊತೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದು ಕಂಡು ಬಂದಿತು.

ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಲಮನ್ನಾಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನರಗುಂದ ಪಟ್ಟಣದ ಪುರಸಭೆಯಿಂದ ಬೆಳಿಗ್ಗೆ 11 ಗಂಟೆಗೆ ಶಾಸಕ ಸಿ.ಸಿ. ಪಾಟೀಲ ಅವರ ನೇತ್ರತ್ವದಲ್ಲಿ ಪ್ರತಿಭಟಣಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪುರಸಭೆ ಆವರಣದ ಎದುರಿನಲ್ಲಿರುವ ಬಾಬಾ ಸಾಹೇಬ ಪುತ್ಥಳಿಗೆ ಶಾಸಕ ಸಿ.ಸಿ. ಪಾಟೀಲ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಆರಂಭಿಸಿದ ಪ್ರತಿಭಟನಾ ರ್ಯಾಲಿ ನಂತರ ಬಸ್ ನಿಲ್ದಾನ ಬಳಿ ಆಗಮಿಸಿ ಕೆಲಕಾಲ ರಾಸ್ತಾರೋಖೋ ನಡೆಸಿದ ಪ್ರತಿಭಟನಾಕಾರರು ರಸ್ತೆಯಲ್ಲಿಯೇ ಭಾಷಣ ನಡೆಸಿದರು. ಎಂದಿನಂತೆ ಬಸ್ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.

ಶಾಸಕ ಸಿ.ಸಿ. ಪಾಟೀಲ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿಯವರ ಮಿಶ್ರ ಪಕ್ಷದ ಆಡಳಿತ ಮುಂದುವರೆದಿದೆ. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರೈತರ ಸಾಲಮನ್ನಾ ಆಗಲೇಬೇಕು. ಇದಕ್ಕಾಗಿ ಯಾವುದೇ ರಾಜೀ ಸಂಧಾನವಿಲ್ಲ. ಸಾಲಮನ್ನಾ ಕುರಿತು ಕುಮಾರಸ್ವಾಮಿಯವರು ಚುನಾವಣೆ ಪೂರ್ವ ನೀಡಿದ ಆಶ್ವಾಸನೆ ಈಡೇರಿಸಬೇಕು, ಸಾಲಮನ್ನಾ ಮಾಡಲಾಗುವುದು ಎಂದು ನೀಡಿದ್ದ ಭರವಸೆಯನ್ನು ಕುಮಾರಸ್ವಾಮಿಯವರು ಮರೆತಿದ್ದರಿಂದ ಬಿಜೆಪಿ ಪ್ರತಿಭಟಣೆ ಮೂಲಕ ಸಾಲಮನ್ನಾಕ್ಕಾಗಿ ಆಗ್ರಹಿಸುತ್ತಿದೆ. ಸಾಲಮನ್ನಾ ಕಡತಕ್ಕೆ ಸಹಿ ಹಾಕುವ ಮೂಲಕ ಸಾಲಮನ್ನಾ ಮಾಡಬೇಕು. ರೈತರು ಕಳೆದು ಮೂರ್ನಾಲ್ಕು ವರ್ಷದಿಂದ ತೊಂದರೆಯಲ್ಲಿದ್ದಾರೆ. ಅವರ ಕೂಗು ತಮ್ಮ ಆಡಳಿತಕ್ಕೆ ಕೇಳಬೇಕು. ರೈತ ಕುಂಟುಂಬದಿಂದ ಬಂದ ಕುಮಾರಸ್ವಾಮಿಯವರಿಗೆ ರೈತರ ಕಷ್ಟಗಳ ಕುರಿತು ಮನವರಿಕೆಯಾಗಬೇಕು. ರೈತರ ಬೆಂಬಲಕ್ಕಾಗಿ ಮುಖ್ಯಮಂತ್ರಿಗಳು ಗಟ್ಟಿ ನಿಲುವು ತಾಳಬೇಕು. ಸಾಲಮನ್ನಾ ಕುರಿತು ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಹುಸಿಗೊಳಿಸಿದಲ್ಲಿ ಬಿಜೆಪಿ ರಾಜ್ಯದಲ್ಲಿ ಪರಿಣಾಮಕಾರಿಯಾದ ಹೋರಾಟ ನಿಗಧಿತ ಅವಧಿಯಲ್ಲಿ ಮುಂದುವರೆಸಲಿದೆ. ರೈತರಿಲ್ಲದೇ ಏನೂ ಇಲ್ಲ. ವ್ಯಾಪಾರಸ್ಥರು ರೈತರನ್ನು ನಂಬಿಕೊಂಡವರೇ ಆಗಿದ್ದು ಅವರಿಲ್ಲದೇ ವ್ಯಾಪಾರವೂ ಇಲ್ಲ. ಹೀಗಾಗಿ ಈ ಬಂದ್ ಕರೆಗೆ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳನ್ನು ಬಂದ್‍ಗೊಳಿಸಿ ಬೆಂಬಲ ನೀಡಬೇಕು. ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ಸಿಗರ ಮಾತು ಕೇಳದೇ ಮುಖ್ಯಮಂತ್ರಿಗಳು ರೈತರ ಸಾಲಮನ್ನಾ ಮಾಡುವ ಗಟ್ಟಿ ನಿಲುವು ತಾಳಬೇಕೆಂದು ಸಿ.ಸಿ. ಪಾಟೀಲ ಆಗ್ರಹಿಸಿದರು.
ಪುರಸಭೆ ಸದಸ್ಯ ವಸಂತ ಜೋಗಣ್ಣವರ, ಬಿಜೆಪಿ ಹಿರಿಯ ಮುಖಂಡ ಎಸ್.ಆರ್. ಹಿರೇಮಠ ಮಾತನಾಡಿದರು. ಪ್ರತಿಭಟನೆಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಎಸ್.ಬಿ. ಕರಿಗೌಡ್ರ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಚಂದ್ರು ದಂಡಿನ, ಉಮೇಶ ಕುಡೇನವರ, ಶಿವನಗೌಡ ಹೆಬ್ಬಳ್ಳಿ, ಎಸ್.ಬಿ. ಹಲಗೌಡ್ರ, ಬಿಜೆಪಿ ತಾಲೂಕ ಮಂಡಳದ ಅಧ್ಯಕ್ಷ ಎಂ.ಐ. ಮೇಟಿ, ಅನೀಲ್ ಧರೆಯಣ್ಣವರ, ಚಂದ್ರು ಪವಾರ, ಉಮೇಶಗೌಡ ಪಾಟೀಲ, ಪ್ರಕಾಶ ಹಾದಿಮನಿ, ಸದಾನಂದ ನರಗುಂದ, ಸತಾರಖಾನ ಪಠಾಣ, ಸಂಗನಗೌಡ ಪಾಟೀಲ, ನಾಗೇಶ ಅಪ್ಪೋಜಿ, ಬಿ.ಡಿ. ಪಾಟೀಲ, ನಾಗರಾಜ ನೆಗಳೂರ, ಮುತ್ತು ಪಾಟೀಲ, ಬಸನಗೌಡ ಕಲ್ಲನಗೌಡ್ರ, ಹುಡೇದಮನಿ ಅನೇಕರು ಉಪಸ್ಥಿತರಿದ್ದರು.

loading...