ಸುನೀಲ ಹೆಗಡೆ ವಿರುದ್ಧ ಪ್ರಶಾಂತ ದೇಶಪಾಂಡೆ ವಾಗ್ದಾಳಿ

0
10
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕಾಳಿನದಿಯಿಂದ ಕೊಳವೆ ಮಾರ್ಗದ ಮೂಲಕ ನೀರನ್ನು ಹರಿಸಿ ಹಳಿಯಾಳ ತಾಲೂಕಿನ ಕೆರೆ ಹಾಗೂ ಬಾಂದಾರುಗಳಿಗೆ ನೀರು ತುಂಬಿಸುವ ತನ್ಮೂಲಕ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ 17500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯ ಬಗ್ಗೆ ದಾಖಲೆ ಸಮೇತ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಭಾಜಪ ಅಭ್ಯರ್ಥಿ ಸುನೀಲ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ ದೇಶಪಾಂಡೆ ಕಾಳಿನದಿ ನೀರಾವರಿ ಯೋಜನೆಯ ದಾಖಲೆಗಳನ್ನು ಪ್ರಸ್ತಾಪಿಸಿ ವಿವರಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ 2013-14 ನೇ ಸಾಲಿನಲ್ಲಿ ಈ ಯೋಜನೆಯ ಬಗ್ಗೆ ಮೊದಲ ಬಾರಿಗೆ ಪ್ರಸ್ತಾವನೆಯಾಗಿದ್ದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಂಪುಟದ ಪ್ರಭಾವಿ ಸಚಿವ ಆರ್‌.ವಿ.ದೇಶಪಾಂಡೆಯವರ ವಿಶೇಷ ಪ್ರಭಾವ ಹಾಗೂ ಪ್ರಯತ್ನದಿಂದಾಗಿ ವಿವಿಧ ಹಂತಗಳನ್ನು ದಾಟಿದ ನಂತರ ಈ ಯೋಜನೆಗೆ ಟೆಂಡರ್‌ ಆಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಶಿಲಾನ್ಯಾಸಗೊಂಡು ಕಾಮಗಾರಿ ನಡೆಯುತ್ತಿದೆ. ಹಾಗೂ ಈ ಕಾಮಗಾರಿ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಂಡು ನಂತರ ರೈತರ ಗದ್ದೆಗಳಿಗೆ ನೀರು ದೊರೆಯುತ್ತದೆ.
ವಾಸ್ತವಿಕ ಸತ್ಯ ಹೀಗಿದ್ದರೂ ಸಹ ಎದುರಾಳಿ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ಅವರು ತಮ್ಮ ಭಾಷಣಗಳಲ್ಲಿ ಈ ಯೋಜನೆ ತಾವೇ ಮಾಡಿಸಿದ್ದು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಒಂದಾನುವೇಳೆ ಸುನೀಲ ಹೆಗಡೆ ಶಾಸಕರಾಗಿದ್ದಾಗ ಸದರಿ ಯೋಜನೆ ಮಂಜೂರಾಗಿದ್ದರೆ ಆ ಬಗ್ಗೆ ಸರ್ಕಾರದ ಅಧಿಕೃತ ಆದೇಶದ ಪ್ರತಿಯನ್ನು ಜನರ ಮುಂದಿಡಲಿ. ವಿನಾಕಾರಣ ದಾಖನೆಗಳು ಇಲ್ಲದೇ ಬರಿ ಸುಳ್ಳಿನ ಆಧಾರದ ಮೇಲೆ ಜನರನ್ನು ಮರಳು ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಳಿನದಿ ನೀರಾವರಿ ಯೋಜನೆಯ ಬಗ್ಗೆ ಒಟ್ಟು 24 ಅಂಶಗಳನ್ನು ಎಳೆ-ಎಳೆಯಾಗಿ ವಿವರಿಸಲಾಯಿತು. 12-7-2013 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 2013-14 ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಲಾದ ಯೋಜನೆ, ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ದಿನಾಂಕ: 23-1-2017 ರಂದು ಹೊರಡಿಸಿದ ಅನುಮೋದನೆ ಪತ್ರ, ದಿನಾಂಕ: 29-6-2017 ರಂದು ಕರ್ನಾಟಕ ಸರಕಾರದ ನಡವಳಿಗಳಲ್ಲಿ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಅವರ ಆದೇಶ ಪತ್ರ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನೀಯರ್‌ ಕಚೇರಿ ಕಳಸಾ ಯೋಜನೆ ವಿಭಾಗ ಖಾನಾಪುರ ಇವರ ವತಿಯಿಂದ 18-7-2017 ರಂದು ಹೊರಡಿಸಿದ ಟೆಂಡರ್‌ ಪ್ರಕಟಣೆ ಹಾಗೂ ಗುತ್ತಿಗೆ ಎಜೆನ್ಸಿಯವರಿಗೆ ನೀಡಿದ ಕಾಮಗಾರಿ ಆದೇಶ (ವರ್ಕ ಆರ್ಡರ್‌) ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಹಿರಿಯ ಮುಖಂಡ ಇಂದಿರಾಕಾಂತ ಕಾಮಕರ, ಪ್ರಮುಖರಾದ ಖಯಾಂ ಮುಗದ, ಶಿವಪುತ್ರ ನುಚ್ಚಂಬ್ಲಿ, ಪೋಮಣ್ಣಾ ದಾನಪ್ಪನವರ, ಪುರಸಭೆಯ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೋಬಾಟಿ, ಸದಸ್ಯರಾದ ಉಮೇಶ ಬೋಳಶೆಟ್ಟಿ, ಸತ್ಯಜೀತ ಗಿರಿ, ಗುಲಾಬಶ್ಯಾ ಲತೀಫನವರ, ಲಕ್ಷ್ಮಣ ಮೇತ್ರಿ, ಶ್ರೀಪಾದ ಮಾನಗೆ, ಖಾಲಿದ್‌ ದುಸಗಿ ಮೊದಲಾದವರು ಪಾಲ್ಗೊಂಡಿದ್ದರು.

loading...