ಹೆಬ್ಬಾರ್‌ ಮೇಲೆ ಹಲ್ಲೆ ಯತ್ನ ವಿರೋದಪಕ್ಷದ ಕೈವಾಡ: ನಾಯ್ಕ

0
15
loading...

ಯಲ್ಲಾಪುರ: ನಮ್ಮ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶಿವರಾಮ ಹೆಬ್ಬಾರ ಕ್ಷೇತ್ರದ 230 ಬೂತ್‌ಗಳಿಗೆ ಕಾರ್ಯಕರ್ತರೊಡನೆ ಭೇಟಿ ನೀಡಿ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದು ಅಬೂತ ಪೂರ್ವ ಬೆಂಬ ವ್ಯಕ್ತವಾಗಿದೆ. ಹೀಗಿರುವಾಗ ಮಂಗಳವಾರ ಮುಂಡಗೋಡು ಪಟ್ಟಣದಲ್ಲಿ ಪ್ರಚಾರದ ಸಂದರ್ಭದಲ್ಲಿ ನಡೆದ ಹೆಬ್ಬಾರ್‌ ಮೇಲೆ ಹಲ್ಲೆ ಯತ್ನ ಘಟನೆ ನಡೆದಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ವಿರೋಧಿಗಳ ಕುತಂತ್ರವೇ ಕಾರಣವಾಗಿದೆ. ಇದನ್ನು ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ ಎಂದು ಮುಂಡಗೋಡ ತಾಲ್ಲೂಕು ಚುನಾವಣಾ ಉಸ್ತುವಾರಿ ಪ್ರೇಮಾನಂದ ನಾಯ್ಕ ಹೇಳಿದರು.
ಅವರು ಬುಧವಾರ ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತ ಕೋಮಿನ ಮಾನಸಿಕವಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಸೇರಿದಂತೆ ಜೊತೆಗಿದ್ದ ಎಲ್ಲರ ಮೇಲೆ ಅನುಚಿತ ವರ್ತನೆ ಮಾಡಿದ್ದು, ಇದಕ್ಕೆ ವಿರೋಧಿ ಪಕ್ಷಗಳ ಕುಮ್ಮಕ್ಕೆ ಕಾರಣವೆಂದು ಆರೋಪಿಸಿದ ಅವರು, ಇಂತಹ ನಾಟಕೀಯ ಘಟನೆಗಳು ವಾಸ್ತವಿಕವಾಗಿ ವಿರೋಧಿ ಪಕ್ಷಗಳಿಗೆ ತಿರುಗು ಬಾಣವಾಗುತ್ತದೆಯೇ ಹೊರತು ಉತ್ತಮ ಅಭಿವೃದ್ಧಿ ಕೆಲಸಗಳಿಂದ ತಮ್ಮ ಕ್ಷೇತ್ರದ ಜನಮಾನಸವನ್ನು ಗೆದ್ದ ಶಿವರಾಮ ಹೆಬ್ಬಾರರ ಮೇಲೆ ಯಾವುದೇ ಅಹಿತ ಉಂಟು ಮಾಡದೆಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿ ಮುಳುಗಿರುವ ಬಿಜೆಪಿಗೆ ಹೇಗಾದರೂ ಅಧಿಕಾರ ಪಡೆದುಕೊಳ್ಳಲೇಬೇಕೆಂಬ ದುರುದ್ದೇಶ ಈ ಘಟನೆಗೆ ಕಾರಣವಾಗಿದೆ ಎಂದ ಅವರು, ಕ್ಷೇತ್ರದ ಮತದಾರರೊಂದಿಗೆ ಮಾನವೀಯ ಸಂಬಂಧಗಳನ್ನು ಇಟ್ಟುಕೊಂಡ ಶಿವರಾಮ ಹೆಬ್ಬಾರರಿಗೆ ಜನಾಶೀರ್ವಾದವೇ ಖಂಡಿತ ಶ್ರೀರಕ್ಷೆಯಾಗಲಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿರೀಷ ಪ್ರಭು, ಕೆ.ಎಂ.ಎಫ್‌ ನಿರ್ದೇಶಕ ಪ್ರಶಾಂತ ಸಭಾಹಿತ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಎಂ. ಶೇಖ್‌, ಉಪಾಧ್ಯಕ್ಷ ಫಕೀರ ಸಾಬ್‌ ಶೇಖ್‌, ಪಕ್ಷದ ಪ್ರಮುಖರಾದ ತಮ್ಮಣ್ಣ ಭಟ್ಟ ಜಿ.ವಿ.ಭಟ್ಟ, ವಿ.ವಿ.ಜೋಶಿ ಮತ್ತಿತರರು ಉಪಸ್ಥಿತರಿದ್ದರು.

loading...