30 ಮಹಿಳೆಯರಲ್ಲಿ ಗೆದ್ದಿದ್ದು ಐವರು ಮಾತ್ರ

0
16
loading...

ಬೆಂಗಳೂರು- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆರಳೆಣಿಕೆ ಯಷ್ಟು ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಿಂದ ರಾಜ್ಯದ 222 ಕ್ಷೇತ್ರಗಳಲ್ಲಿ ಕೇವಲ 30 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದ್ದ ಮಹಿಳಾ ಮಣಿಗಳಲ್ಲಿ ಕೆಲವೇ ಕೆಲವು ಮಂದಿ ಗೆಲುವಿನ ನಗೆ ಬೀರಿದ್ದಾರೆ. ರಾಜಕೀಯದಲ್ಲಿ ಪಳಗಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದ ಮಹಿಳಾ ಮಣಿಗಳು ಈ ಬಾರಿ ಸೋಲಿನ ರುಚಿ ಕಂಡಿದ್ದಾರೆ.

ಕೆಜಿಎಫ್‍ನಲ್ಲಿ ಸ್ಪರ್ಧಿಸಿದ್ದ ಸಂಸದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ಕಾಂಗ್ರೆಸ್‍ನ ರೂಪಾ ಶಶಿಧರ್, ಹಿರಿಯೂರಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್, ಕಾರವಾರದ ರೂಪಾಲಿ ನಾಯಕ್, ಶಶಿಕಲಾ ಜೊಲ್ಲೆ ಜಯ ಗಳಿಸಿದ್ದಾರೆ. ಉಳಿದಂತೆ ತೇರದಾಳ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚಿವೆ ಉಮಾಶ್ರೀ, ಗುಂಡ್ಲುಪೇಟೆಯಲ್ಲಿ ಕಣಕ್ಕಿಳಿದಿದ್ದ ಗೀತಾ ಮಹದೇವ ಪ್ರಸಾದ್ ಸಹ ಗೆಲುವಿನಿಂದ ವಿಮುಖರಾಗಿದ್ದಾರೆ.  ಮೂಡಿಗೆರೆಯಲ್ಲಿ ಸ್ಪರ್ಧಿಸಿದ್ದ ಮೋಟಮ್ಮ ಭಾರೀ ಅಂತರದಿಂದ ಸೋಲನ್ನಪ್ಪಿದ್ದರೆ, ಉಳಿದಂತೆ ಬೊಮ್ಮನಹಳ್ಳಿ, ಬೇಲೂರು ಮತ್ತಿತರೆಡೆ ಸೋಲು ಕಂಡಿರುವುದಲ್ಲದೆ ರಾಮನಗರದ ನಂದಿನಿಗೌಡ ಠೇವಣಿ ಕಳೆದುಕೊಂಡಿದ್ದಾರೆ.  ಒಟ್ಟಾರೆ ಈ ಬಾರಿ ಶೇಕಡಾವಾರು ಲೆಕ್ಕಾಚಾರದಲ್ಲಿ ಅತಿ ಕಡಿಮೆ ಮಂದಿ ಮಹಿಳೆಯರು ಸ್ಪರ್ಧಿಸಿರುವುದರ ಜತೆಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿಜಯ ಸಾಧಿಸಿದ್ದಾರೆ. ಬಿಜೆಪಿಯ ಮೂವರು ಹಾಗೂ ಕಾಂಗ್ರೆಸ್‍ನಿಂದ ಒಬ್ಬರು ಮಹಿಳಾ ಸ್ಪರ್ಧಿ ಜಯ ಗಳಿಸಿದ್ದಾರೆ.

loading...