5 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಪ್ರಜಾಪ್ರಭು ದೇವರು..!

0
9
loading...

ವಿಜಯಪುರ : 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭ…! ಮತದಾನ ಪ್ರಜಾಪ್ರಭುಗಳು ಇಂದು ತನ್ನ ನಿರ್ಧಾರವನ್ನು ಮತಯಂತ್ರಗಳಲ್ಲಿ ಭದ್ರಪಡಿಸಲಿದ್ದಾರೆ. ವಿಧಾನಸಭೆ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿದೆ.

ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಈಗಾಗಲೇ ಇವಿಎಂ ಮಷೀನ್‍ಗಳೊಂದಿಗೆ ಮತ ಕೇಂದ್ರಗಳತ್ತ ತೆರಳಿದ್ದಾರೆ.
ಮತಗಟ್ಟೆಗೆ ಸಮಾಜಘಾತುಕ ಶಕ್ತಿಗಳ ಪ್ರವೇಶವನ್ನು ತಡೆಯುವುದಕ್ಕಾಗಿ ಪೊಲೀಸ್ ಇಲಾಖೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಅತೀ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್ ಕಾಸ್ಟಿಂಗ್ ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಮತದಾರರನ್ನು ಕರೆತರುವಲ್ಲಿ ಲಾರಿ, ಟಂಟಂ, ಟ್ರ್ಯಾಕ್ಟರ್ ಮೊದಲಾದ ವಾಹನಗಳ ವ್ಯವಸ್ಥೆಯನ್ನು ಪರೋಕ್ಷವಾಗಿ ಕೈಗೊಳ್ಳಲಾಗುತ್ತಿದೆ.
ಆಯಾ ಪ್ರದೇಶದ ವೋಟ್ ಪುಲ್ಲರ್ಸ್ (ಪ್ರಭಾವಿ ಮುಖಂಡರು) ಸಭೆ ನಡೆದಿದ್ದು, ಆಯಾ ಬಡಾವಣೆ, ವಸ್ತಿ, ಜನವಸ್ತಿ ಪ್ರದೇಶಗಳ ಹೊಣೆಗಾರಿಕೆಯನ್ನು ಆಯಾ ಮುಖಂಡರಿಗೆ ವಹಿಸಿಕೊಡಲಾಗಿದೆ. ಮತಗಟ್ಟೆಯಿಂದ ಅಣತಿ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ವಾಪಾಸ್ಸು ಊರಿಗೆ ಬಿಡುವವರೆಗೂ ವ್ಯವಸ್ಥೆ ಮಾಡುವ ಸಕಲ ಸಿದ್ಧತೆಗಳು ನಡೆದಿವೆ.

ಜಿಲ್ಲೆಯಲ್ಲಿ ಎಲ್ಲ ಮತದಾನ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಸಹ ಕಲ್ಪಿಸಲಾಗಿದೆ. ವಿಕಲಚೇತನ ಸ್ನೇಹಿ ಮತದಾನ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ 8 ಸಾಮಾನ್ಯ ಮಾದರಿ ಮತದಾನ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಮಾಹಿತಿ ನೀಡಿದರು.

loading...