ಅವಿರೋಧ ಆಯ್ಕೆ ಅಭ್ಯರ್ಥಿಗಳ ಪಟ್ಟಿ ಜಿಲ್ಲಾ ಸಮಿತಿಗೆ ಕಳುಹಿಸುವಂತೆ ಸೂಚನೆ

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೂ ಮುನ್ನ ಆಯಾ ಬ್ಲಾಕ್‌ ಸಮಿತಿಗಳು ಆಕಾಂಕ್ಷಿಗಳ ಜೊತೆ ಸಭೆ ನಡೆಸಬೇಕು. ಸಾಧ್ಯವಾದಷ್ಟು ಅವಿರೋಧ ಆಯ್ಕೆ ಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಸಮಿತಿಗೆ ಕಳುಹಿಸುವಂತೆ ಬುಧವಾರ ನಡೆದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ಶಿರಸಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ದತೆ ಹಾಗೂ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲೆಯ 3 ನಗರಸಭೆ, 3 ಪುರಸಭೆ ಹಾಗೂ ಉಳಿದ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಕ್ಷವನ್ನು ಸದೃಢಗೊಳಿಸುವುದು, ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ನಗರ ಪ್ರದೇಶದಲ್ಲಿ ಪಕ್ಷದ ಸಂಘಟನೆ ಬಲಿಪಡಿಸುವ ಕುರಿತಂತೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ನಗರಸಭೆ ಚುನಾವಣೆ ಹತ್ತಿರ ಬರುತ್ತಿದೆ. ಯಾವ ವಾರ್ಡ್‌ನಲ್ಲಿ ಯಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಬ್ಲಾಕ್‌ ಸಮಿತಿ ಪರಿಶೀಲಿಸಬೇಕು. ಆಯಾ ವಾರ್ಡ್‌ಗಳಲ್ಲಿ ಹಾಲಿ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಸಭೆ ಕರೆದು ವಾರ್ಡ್‌ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಯಾರು ಎಷ್ಟು ಮತ ತಂದಿದ್ದಾರೆ ಎಂಬುದನ್ನು ಗಮನಿಸಬೇಕು ಎಂದರು. ಕರಾವಳಿ ಭಾಗದಲ್ಲಿ ಪರೇಶ ಮೇಸ್ತ ಸಾವಿನ ಪ್ರಕರಣ ಕಾಂಗ್ರೆಸ್ಸಿನ ಸೋಲಿಗೆ ಕಾರಣವಾಗಿತ್ತು. ಆ ಭಾಗದ ಪ್ರಮುಖರು ಈ ವಿಚಾರವಾಗಿ ಗಂಭೀರ ವಿಶ್ಲೇಷಣೆ ಮಾಡಬೇಕು. ಬಿಜೆಪಿಗೆ ಹೋಗುವ ಮತಗಳನ್ನು ಕಾಂಗ್ರೆಸ್ಸಿಗೆ ತರುವ ಪ್ರಯತ್ನ ಆಗಬೇಕು ಎಂದು ಸೂಚಿಸಿದರು.
ಹಿರಿಯ ಕಾಂಗ್ರೆಸ್ಸಿಗ ಎನ್‌.ಪಿ.ಗಾಂವಕರ್‌ ಮಾತನಾಡಿ, ಕುಮಟಾ, ಹೊನ್ನಾವರ, ಕಾರವಾರ ಹಾಗೂ ಸಿದ್ದಾಪುರ ಬ್ಲಾಕ್‌ ಸಮಿತಿಗಳಲ್ಲಿ ಸ್ಥಳೀಯವಾಗಿ ಭಿನ್ನಮತ ಹೆಚ್ಚಿದೆ. ಹೀಗಾದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆಲುವು ಕಷ್ಟವಾಗಲಿದೆ. ಹಾಗಾಗಿ ಬ್ಲಾಕ್‌ ಸಮಿತಿಯನ್ನು ಬದಲಾಯಿಸಬೇಕು ಎಂದರು. ಜಿಲ್ಲೆಯಲ್ಲಿ ಬಿಜೆಪಿಯವರ ಸಾಮಾಜಿಕ ಜಾಲತಾಣದ ಪ್ರಚಾರ ಪ್ರಬಲವಾಗಿದೆ. ಆದರೆ ಕಾಂಗ್ರೆಸ್‌ ಈ ವಿಚಾರದಲ್ಲಿ ಬಹಳ ಹಿಂದಿದೆ. ಶೀಘ್ರದಲ್ಲಿ ಕ್ರೀಯಾಶೀಲರಾಗಿ ಪ್ರಚಾರ ವೈಖರಿ ಚುರುಕುಗೊಳಿಸಬೇಕು ಎಂದು ಶ್ರೀಪಾದ ಕಡವೆ ಎಂದರು.
ಕುಮಟಾದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ….
ಇದೇ ವೇಳೆ ವಿಧಾನಸಭೆ ಚುನಾವಣೆ ಸೋಲಿನ ಕುರಿತಂತೆ ಮಾತನಾಡಿದ ಹೊನ್ನಾವರದ ಜಗದೀಪ ತೆಂಗೇರಿ ಮಾತನಾಡಿ, ಪಕ್ಷ ದ್ರೋಹ ಮಾಡಿದವರನ್ನು ಇನ್ನು ಪಕ್ಷದಲ್ಲೇ ಮುಂದುವರೆಸಲಾಗಿದೆ. ಆಹ್ವಾನ ನೀಡದಿದ್ದರು ಅಂತಹವರು ಕಾರ್ಯಕಾರಿ ಸಮಿತಿ ಸಭೆಗೆ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ರವಿ ಶೆಟ್ಟಿ ಕವಲಕ್ಕಿ ಆಕ್ರೋಶ ವ್ಯಕ್ತಪಡಿಸಿ ಹೊನ್ನಾವರದಲ್ಲಿ 21 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷಕ್ಕೆ ದ್ರೋಹ ಮಾಡುವ ಅನಿವಾರ್ಯತೆ ನನಗಿಲ್ಲ. ವ್ಯಕ್ತಿಗತವಾಗಿ ಹೋರಾಟ ಮಾಡಿ ಪಕ್ಷ ಸಂಘಟಿಸಿದ್ದೇನೆ ಎಂದರು. ಇದಕ್ಕೆ ಕುಮಟಾದ ಹೊನ್ನಪ್ಪ ನಾಯ್ಕ ದನಿಗೂಡಿಸಿ, ಕುಮಟಾದಲ್ಲಿ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಸ್ಥಳೀಯವಾಗಿ ವಿರೋಧ ಇದ್ದರೂ ಅಭ್ಯರ್ಥಿ ಘೋಷಿಸಿದ್ದು ಸೋಲಿಗೆ ಕಾರಣವಾಗಿದೆ. ಈಗ ಸೋತವರು ಪಕ್ಷ ಸಂಘಟನೆ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿ ಕ್ರಮ ಕೈಗೊಳ್ಳಬೇಕು ಎಂದರು. ಎಲ್ಲರ ಮಾತು ಆಲಿಸಿದ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿ, ಎಐಸಿಸಿ ಅಭ್ಯರ್ಥಿಗಳನ್ನು ಮಾಡಿದ ನಂತರ ಯಾರು ಅದರ ವಿರುದ್ಧ ಚಕಾರ ಎತ್ತುವಂತಿಲ್ಲ. ಆದರೂ ಕೆಲವೆಡೆ ಭಿನ್ನಮತ ಹೊರಹಾಕಿದ ಪರಿಣಾಮ ಪಕ್ಷಕ್ಕೆ ಸೋಲುಂಟಾಗಿದೆ. ಕಳೆದ 9 ವರ್ಷದಿಂದ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡುತ್ತಿರುವ ನನಗೆ ಯಾರು ಹೇಗೆ ಎಂಬುದು ಗೊತ್ತಿದೆ. ಆದರೂ ಪಕ್ಷ ಸಂಘಟಿಸುತ್ತಾ ಬಂದಿದ್ದೇನೆ. ನಮ್ಮ ನಮ್ಮೊಳಗೆ ಭಿನ್ನಮತ ಸರಿಯಲ್ಲ. ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟಿಸಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದೆ ಎಂದರು.
ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ತೊಡಗಿಕೊಂಡ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಪ್ರಮುಖರಾದ ಮಾಧವ ರೇವಣಕರ್‌, ರಮಾನಂದ ನಾಯಕ, ಎಸ್‌.ಕೆ.ಭಾಗ್ವತ, ಎಚ್‌.ಎಂ.ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...