ಆತ್ಮವಿಶ್ವಾಸ ಹೊಂದಿದವರಿಗೆ ಸೋಲಾಗುವದಿಲ್ಲ

0
17
loading...

ಬೀಳಗಿ: ಆತ್ಮವಿಶ್ವಾಸ ಹೊಂದಿದವರಿಗೆ ಎಂದೂ ಸೋಲಾಗುವದಿಲ್ಲ. ತಂದೆ-ತಾಯಿಯ ಬೆಂಬಲದಿಂದ ಒಳ್ಳೆಯ ಶಿಕ್ಷಣ ಪಡೆಯಬೇಕು. ಪ್ರತಿ ಸ್ಪರ್ಧೆಗಳಲ್ಲಿಯೂ ಭಾಗವಹಿಸಬೇಕು. ಸೋಲು, ಗೆಲವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ಭಾರತೀಯ ಸೇನೆಯ ಲೆಪ್ಟಿನೆಂಟ್‌ ಕರ್ನಲ್‌ ಮಂಜುನಾಥ ಅ ಪಾಟೀಲ ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದ ಶ್ರೀಮತಿ ಎಂ ಎಂ ಸಾಹುಕಾರ ಸರಕಾರಿ ಪ್ರೌಢ ಶಾಲೆ, ಪ್ರಜಾಗುರಿ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಯೋಗ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಸಾಧಿಸಬೇಕೆಂಬ ಛಲವಿರಬೇಕು. ಪಠ್ಯದ ಜೊತೆಗೆ ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮಹಾಯೋಗಿ ತತ್ವಜ್ಞಾನಿ ಯೋಮನ ಕೃಷಿ ಪ್ರಶಸ್ತಿ ಪುರಷ್ಕೃತ ಪ್ರಗತಿಪರ ರೈತ ವೆಂಕಟೇಶ ಬರಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಡಿ ಕಾಯುವ ಯೋಧ, ದೇಶಕ್ಕೆ ಅನ್ನ ಹಾಕುವ ರೈತರನ್ನು ಗೌರವಿಸುವ ಕೆಲಸವಾಗಬೇಕು. ಈ ಎರಡು ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯವೆಂದು ಹೇಳಿದರು.
ಶಾಲೆ, ಕಾಲೇಜು ಸೂಟಿ ಇದ್ದ ದಿನಗಳಲ್ಲಿ ಹೊಲ, ಗದ್ದೆಗಳಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ಪಾಲಕರೊಂದಿಗೆ ಪಾಲ್ಗೊಳ್ಳಬೇಕು. ಜಮೀನು ಹೊಂದಿದವರು 10 ಗುಂಟೆಯಲ್ಲಿ ಸಾವಯವ ಪದ್ದತಿಯಲ್ಲಿ ತರಕಾರಿ ಬೆಳೆಯುವದನ್ನು ರೂಢಿಸಿಕೊಳ್ಳಬೇಕು. ವಿಷಮುಕ್ತ ಆಹಾರ ಸೇವನೆಯಿಂದ ರೋಗರಹಿತ ಜೀವನ ನಡೆಸಬಹುದೆಂದು ಹೇಳಿದರು.
ಪ್ರಜಾಗುರಿ ಗ್ರಾಮೀಣಾಭಿವೃಧ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಅಧ್ಯಕ್ಷ ಡಿ. ಎಂ. ಸಾಹುಕಾರ ಮಾತನಾಡಿ, ಸಾಧನೆ ಎಂಬುದು ಸಾಧಕರ ಸೊತ್ತು, ಸೋಮಾರಿಗಳ ಸ್ವತ್ತಲ್ಲ. ಹೀಗಾಗಿ ಸದಾ ಕ್ರಿಯಾಶೀಲರಾಗಿ, ಸತತ ಪ್ರಯತ್ನದ ಮೂಲಕ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಎಚ್‌. ಆರ್‌. ಕಂಬಳಿ ಮಾತನಾಡಿ, ಯೋಗ ಮನುಷ್ಯನ ಶರೀರ, ಮನಸ್ಸನ್ನು ಸದೃಢಗೊಳಿಸುತ್ತದೆ. ದಿನನಿತ್ಯ ಯೋಗಭ್ಯಾಸ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಎಸ್‌. ಎಂ. ಬಸನಗೌಡ್ರ, ಬಿ. ಎಸ್‌. ಭೂಷಣ್ಣವರ ಮಾತನಾಡಿ, ಕೆಟ್ಟ ಹವ್ಯಾಸಗಳಿಂದ ದೂರವಿದ್ದು, ಗುರುವಿನ ಮಾರ್ಗದರ್ಶನದಲ್ಲಿ ಮುಂದೆ ಗುರಿ ಇರಿಸಿಕೊಂಡು ಶ್ರದ್ಧೆ, ಭಕ್ತಿಯಿಂದ ಕ್ರಿಯಾಶೀಲರಾಗಿ ಮುನ್ನುಗ್ಗಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಗ್ರಾಪಂ ಅಧ್ಯಕ್ಷೆ ಶಾಂತಾ ಬಳಿಗಾರ, ಮುಖ್ಯೋಪಾಧ್ಯಾಯರಾದ ಡಿ.ಸಿ. ಕಂಡ್ರಿ, ಎ. ಎಸ್‌. ಪಾಟೀಲ, ಎಸ್‌ಡಿಎಂಸಿ ಸದಸ್ಯ ಬಾಬು ಪಾಟೀಲ, ಸುರೇಶ ಅಂಟೀನ, ಬಿ.ಎಸ್‌. ಕಾಜಗಾರ, ಎಸ್‌.ಎಸ್‌. ಉಳ್ಳೇಗಡ್ಡಿ, ಶ್ರೀದೇವಿ ಹೊಸಪೇಟಿ, ವಿದ್ಯಾವತಿ ಶಿರೋಳ, ಲಕ್ಷ್ಮೀ, ಎಸ್‌. ಎಂ. ರಾಂಪೂರ ಮತ್ತಿರರು ಇದ್ದರು.

loading...