ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ

0
16
loading...

ಬಾಗಲಕೋಟೆ: ಜಿಲ್ಲೆಯಲ್ಲಿ ಜೂನ್‌ 21 ರಿಂದ 28 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ನಕಲುಮುಕ್ತವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೂರಕ ಪರೀಕ್ಷೆಯಲ್ಲಿ ಒಟ್ಟು 8235 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬದಾಮಿ 3, ಬಾಗಲಕೋಟೆ 3, ಬೀಳಗಿ 3, ಹುನಗುಂದ 2, ಜಮಖಂಡಿ 8 ಹಾಗೂ ಮುಧೋಳ 4 ಸೇರಿದಂತೆ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು 3 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದ್ದು, ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಕೇಂದ್ರದ ಮುಖ್ಯ ಅಧೀಕ್ಷಕರಾಗಿದ್ದು, ತಮಗೆ ನೀಡಿರುವ ಕರ್ತವ್ಯಗಳನ್ನು ಪಾಲಿಸಿ ಯಾವುದೇ ತರಹದ ಲೋಪ ಕಂಡು ಬರದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಸೂಚಿಸಿದರು. ನಕಲು ರಹಿತ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ಜಾಗೃತ ದಳ ಹಾಗೂ ಜಿಲ್ಲಾ ಮಟ್ಟದ ಜಾಗೃತ ದಳವನ್ನು ನೇಮಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಿಳಿಸಿದರು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಹೊರತುಪಡಿಸಿ ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿಗಳು ಪರೀಕ್ಷಾ ಅವಧಿಯಲ್ಲಿ ಮೊಬೈಲ್‌ ಬಳಸುವಂತಿಲ್ಲ. ಪೊಲೀಸ್‌ ಬಂದೋಬಸ್ತ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ ಪರೀಕ್ಷಾ ಸಿದ್ದತೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಬಸವರಾಜ ಶಿರೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪರೀಕ್ಷಾ ವೇಳಾ ಪಟ್ಟಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಬೆಳಿಗ್ಗೆ 9.30 ರಿಂದ ಮದ್ಯಾಹ್ನ 12.30 ರವರೆಗೆ ನಡೆಯಲಿವೆ. 21 ರಂದು ಗಣಿತ, 22 ರಂದು ಪ್ರಥಮ ಭಾಷೆ ಕನ್ನಡ, 25 ರಂದು ವಿಜ್ಞಾನ, 26 ರಂದು ದ್ವಿತೀಯ ಭಾಷೆ ಇಂಗ್ಲೀಷ, 27 ರಂದು ಸಮಾಜ ವಿಜ್ಞಾನ, 28 ರಂದು ತೃತೀಯ ಭಾಷೆ ಹಿಂದಿ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಜಿಲ್ಲೆಯಲ್ಲಿ ಜೂನ್‌ 21 ರಿಂದ 28 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಹಾಗೂ ದೋಷ ರಹಿತವಾಗಿ ನಡೆಸಲು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳನ್ನು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರಿಗೆ ಒಳ ಪ್ರವೇಶಿಸದಂತೆ ನಿರ್ಬಂದಿಸಿ ಮತ್ತು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಝರಾಕ್ಸ ಅಂಗಡಿಗಳು ಇದ್ದಲ್ಲಿ ಪರೀಕ್ಷೆ ನಡೆಯುವ ದಿನದಂದು ಮುಚ್ಚತಕ್ಕದ್ದೆಂದು ಸಿಆರ್‌ಪಿಸಿ ಕಲಂ 144ರಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ಆದೇಶ ಹೊರಡಿಸಿದ್ದಾರೆ.

loading...