ಇತಿಹಾಸ ಪುರುಷರ ಸ್ಮಾರಕ ರಕ್ಷಣೆಗೆ ಆದ್ಯತೆ: ಸುರಳಕರ

0
15
loading...

ಬಾಗಲಕೋಟೆ: ಕನ್ನಡ ನಾಡಿಗಾಗಿ ನುಡಿಗಾಗಿ ಹಾಗೂ ಇಲ್ಲಿಯ ನೆಲ, ಜಲಕ್ಕಾಗಿ ಇತಿಹಾಸ ನಿರ್ಮಿಸಿ ಮರೆಯಾದ ಇತಿಹಾಸ ಪುರುಷರ ಸ್ಮಾರಕಗಳ ಸಂಶೋಧನೆ ಹಾಗೂ ರಕ್ಷಣೆ ಆಗಬೇಕೆಂದು ಜಿ.ಪಂ ಸಿಇಓ ವಿಕಾಸ ಸುರಳಕರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಮಾತನಾಡಿದ ಅವರು ನಾಡಿನ ಜನರ ಒಳಿತಿಗಾಗಿ ತಮ್ಮ ಸ್ವಾರ್ಥ ಬದುಕು ಬಿಟ್ಟು ಜನರಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಮತ್ತು ಅವಿಶ್ಮರಣೀಯ ಹಾಗೂ ಅಚ್ಚಳಿಯದೇ ತಮ್ಮ ಕುರುಹುಗಳನ್ನು ಉಳಿಸಿ ಇಂದಿಗೂ ಕೂಡ ಜನಮನದಲ್ಲಿ ಉಳಿದ ಇತಿಹಾಸ ಪುರುಷರ ಸಾಲಿನಲ್ಲಿ ಕೆಂಪೇಗೌಡರು ಒಬ್ಬರಾಗಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಮೋಡಿ ಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ ಮಾತನಾಡಿ, ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕಾದರೆ ಅದರ ಹಿಂದೆ ಅದನ್ನು ನಿರ್ಮಿಸಿದ ಹಾಗೂ ಆ ಭಾಗದ ಪಾಳೇಗಾರನಾಗಿ ನಾಡಪ್ರಭುವೆಂದೆನಿಸಿಕೊಂಡ ಕೆಂಪೇಗೌಡರ ಶ್ರಮ ಅಮೋಘವಾಗಿದೆ. ಕೆಂಪೇಗೌಡರು ಕ್ರಿ.ಶ 1510 ರಿಂದ 1569 ರವರೆಗೆ ಬೆಂಗಳೂರಿನ ಈಗಿನ ಯಲಹಂಕದ ಪಾಳೇಗಾರರಾಗಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಅಂದಿನ ಹಂಪಿಯ ವೈಭವವನ್ನು ಕಂಡು ಬೆರಗಾಗಿ ಅಂತಹದೇ ಒಂದು ನಗರ ನಿರ್ಮಿಸಬೇಕೆಂಬ ದೂರ ದೃಷ್ಠಿ ಇಟ್ಟುಕೊಂಡು ಬೆಂಗಳೂರು ನಿರ್ಮಿಸಿದ್ದಾರೆ ಎಂದು ತಿಳಿಸಿದರು. ಇಂದು ಬೆಂಗಳೂರು ನಗರದಲ್ಲಿ ಅವರು ಬಿಟ್ಟುಹೋದ ಅನೇಕ ಕುರುಹುಗಳ ರಕ್ಞಣೆಯಾಗಬೇಕಾಗಿದೆ ಎಂದ ಅವರು ಕೆಂಪೇಗೌಡರಿಗೆ ಮುಂದಿನ ಜನಾಂಗಕ್ಕೆ ನೀರಿನ ಭವನೆಯಾಗಬಾರದೆಂಬ ಉದ್ದೇಶದಿಂದ ಬೃಹದಾಕಾರದ ಕೆರೆಗಳ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರು. ಅವುಗಳಲ್ಲಿ ಕೆಂಪಾಂಬುದಿ, ಧರ್ಮಾಂಬುದಿ, ಸಂಪಂಗಿರಾಮ, ಚನ್ನಮ್ಮನ ಕೆರೆ, ಕಾರಂಜಿ, ಹಲಸುರು, ಕೆಂಪಾಪುರ ಅಗ್ರಹಾರ, ಗಿಡ್ಡಪ್ಪನ ಕೆರೆಗಳು ಇತಿಹಾಸದ ಯಾವ ಸ್ವತಂತ್ರ ರಾಜರು ಕೂಡಾ ಮಾಡದಂತಹ ಕಾರ್ಯಗಳನ್ನು ಕೆಂಪೇಗೌಡರು ಮಾಡಿದ್ದು, ಅಲ್ಲದೇ ಅವರಾಳಿದ ಸಮಯದಲ್ಲಿ ಕೃಷ್ಣಾಪುರದ ಲಕ್ಷ್ಮೀನಾರಾಯಣ ದೇವಾಲಯ ಹತ್ತಿರ, ಬನಶಂಕರಿಯಲ್ಲಿರುವ ನಾಗಲಕ್ಷ್ಮೀ ಕಲ್ಯಾಣ ಮಂಟಪ ಹತ್ತಿರ, ಲಾಲಬಾಗ ಗಾಜಿನ ಮನೆ ಎದುರಿಗೆ, ರೇಸ್‌ಕೋರ್ಸ ಪಕ್ಕದಲ್ಲಿ ಕಲಾಶಿಪಾಳ್ಯದ ಐಯ್ಯಪ್ಪ ದೇವಾಲಯದ ಬಳಿ, ರೇಲ್ವೆ ನಿಲ್ದಾಣದ ಬಳಿ, ಚಾಮರಾಜ ಪೇಟೆಯಲ್ಲಿ ಕೆಂಗೇರಿ ಸುತ್ತ ಮುತ್ತ ವೀರ ಗಲ್ಲುಗಳು ಹಾಗೂ ಮಹಾಸತಿ ಕಲ್ಲುಗಳು ಇಂದಿಗೂ ಕೂಡಾ ಅನಾತವಾಗಿ ಬಿದ್ದಿದ್ದು, ಅವುಗಳನ್ನು ಸಂಶೋಧಿಸಿ ಕೆಂಪೇಗೌಡರಿಗೆ ಇರುವ ಭವಿಷ್ಯದ ಅಭಿವೃದ್ದಿ ಬಗ್ಗೆ ವಿಷಯಗಳು ತಿಳಿದು ಬರುತ್ತವೆ. ಸರಕಾರ ಅವುಗಳ ರಕ್ಷಿಸುವ ಕಾರ್ಯ ಮಾಡಬೇಕೆಂದರು. ಕೆಂಪೇಗೌಡರು ಸ್ಮಾರಕಗಳಲ್ಲದೇ ಅನೇಕ ಕೋಟೆಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ಏಳು ಸುತ್ತಿನ ಕೋಟೆ, ಹುಲಿಯೂರು ದುರ್ಗ, ಬೆಂಗಳೂರಿನ ಕೋಟೆ, ಮಾಗಡಿ ಕೋಟೆ, ಸಾವಣದುರ್ಗ ಮತ್ತು ನೆಲಪಟ್ಟಣ, ಹರ್ತೀದುರ್ಗ, ಹುಲಿಯೂರು ದುರ್ಗ, ಕುದುರಿನ ಭೈರವನ ದುರ್ಗ, ರಾಮನಗರದ ರಾಮದುರ್ಗ ಕೋಟೆಗಳು ಪ್ರಸಿದ್ದಿಯಾಗಿದ್ದು, ದೇವಸ್ಥಾನಗಳನ್ನು ನಿರ್ಮಿಸುವಲ್ಲಿ ಕೆಂಪೇಗೌಡರು ಅಗಾದ ಶ್ರಮ ವಹಿಸಿದ್ದಾರೆ. ಹಳೆಯ ದೇವಾಲಯಗಳ ಜೀರ್ನೋದ್ದಾರ ಒಳಗೊಂಡಂತೆ ಅನೇಕ ಹೊಸ ದೇವಸ್ಥಾನಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ದೊಡ್ಡ ಬಸವನ ಗುಡಿ, ಆಂಜನೇಯ ಗುಡಿ, ಗಣಪತಿ ದೇವಾಲಯ, ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಬೆಂಗಳೂರಿನ ನಗರದ ಗ್ರಾಮದೇವತೆ ಅನ್ನಮ್ಮ ದೇವಸ್ಥಾನ ಅವರು ನಿರ್ಮಿಸಿದ ಪ್ರಸಿದ್ದ ದೇವಸ್ಥಾನಗಳಾಗಿವೆ ಎಂದು ತಿಳಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಸದಸ್ಯ ಯಲ್ಲಪ್ಪ ಬೆಂಡಿಗೇರಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿ ವಂದಿಸಿದರೆ. ಕಂದಾಯ ಇಲಾಖೆಯ ಶಿರಸ್ತೆದಾರ ಎಂ.ಎನ್‌.ಗುಡೂರ ವಂದಿಸಿದರು.

loading...