ಉಚಿತ ಬಸ್‌ ಪಾಸ್‌ ವಿತರಿಸುವಂತೆ ಮನವಿ

0
17
loading...

ಕನ್ನಡಮ್ಮ ಸುದ್ದಿ-ಶಿರಸಿ: ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಸರ್ಕಾರ ನೀಡುತ್ತಿದ್ದ ಉಚಿತ ಬಸ್‌ ಪಾಸ್‌ಗಳನ್ನು ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೂ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಶಿರಸಿ ಘಟಕ ಸದಸ್ಯರು ಪ್ರತಿಭಟಿಸಿದ್ದಲ್ಲದೇ ಶಾಸಕರಿಗೆ ಮನವಿ ಸಲ್ಲಿಸಿದರು.
ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಉಚಿತ ಬಸ್‌ ಪಾಸ್‌ ವಿತರಿಸುವಂತೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಳೆದ ಶೈಕ್ಷಣಿಕ ವರ್ಷಗಳಲ್ಲಿ ರಾಜ್ಯ ಸರ್ಕಾರದ 2018-19ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಆ ಯೋಜನೆಯನ್ನು ಜಾರಿಗೊಳಿಸದೆ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್‌ಪಾಸ್‌ ನೀಡಿ, ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ವಿರೋಧಿ ಕ್ರಮವನ್ನು ಪ್ರತಿಭಟನಾನಿರತರು ಖಂಡಿಸಿದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದರಿಂದ ಅತಿಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಉಚಿತ ಬಸ್‌ಪಾಸ್‌ ವಿತರಣೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯವುದೇ ರೀತಿಯಲ್ಲಿ ಹೆಚ್ಚಿನ ಹೊರೆಯಾಗುವುದಿಲ್ಲ. ಈಗಾಗಲೇ ಬಸ್‌ ಪಾಸ್‌ ವಿತರಿಸಲಾಗುತ್ತಿದ್ದು, ತಕ್ಷಣದಿಂದ ಜಾರಿಯಾಗುವಂತೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ವಿತರಿಸುವಂತೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮನವಿ ಸ್ವೀಕರಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳಲ್ಲಿ ಒಡಕು ಮೂಡಿಸುತ್ತಿರುವುದು ಖಂಡನೀಯ. ಸರ್ಕಾರವು ಎಲ್ಲ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆ ಉಚಿತ ಬಸ್‌ ಪಾಸ್‌ ನೀಡುವಂತೆ ಒತ್ತಾಯಿಸಲಾಗುವುದು. ಸದನದ ಒಳಗೆ ಹಾಗೂ ಹೊರಗೆ ಸರ್ಕಾರದ ಈ ತಾರತಮ್ಯದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು. ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿತ್ತು. ಯಾವುದೇ ತಾರತಮ್ಯ ಭಾವನೆ ಬರದಮನತೆ ಎಚ್ಚರಿಕೆ ವಹಿಸಿತ್ತು. ಆದರೆ ಈಗಿನ ಸರ್ಕಾರವು ಧರ್ಮದ ಆಧಾರದಲ್ಲಿ ಇಡೀ ಸಮಾಜ ಒಡೆಯುವ ಹುನ್ನಾರ ಮಾಡುತ್ತಿದೆ. ಇದು ನಿವಾರಣೆಯಾಗಲು ಸಮಾಜ ಸಂಘಟಿತವಾಗಿ ಹೋರಾಡಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

loading...