ಕಡಲತಿ ನಿಯಮ ಉಲ್ಲಂಘಿಸಿದ ಅಧಿಕಾರಿಗಳಿಗೆ ನೋಟಿಸ್‌

0
7
loading...

ಕಾರವಾರ: ಇಲ್ಲಿನ ಕಡಲತೀರದಲ್ಲಿ ಸಿಆರ್‌ಜಡ್‌ ಕಾಯಿದೆ ಉಲ್ಲಂಘಿಸಿ ಕಾನೂನುಬಾಹೀರವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ನಿಯಂತ್ರಣ ವಲಯದ ಪೂರ್ವಾನುಮತಿ ಪಡೆಯದೇ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಸಿಆರ್‌ಜಡ್‌ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಶಾಶ್ವತ ಕಟ್ಟಡ ಕಟ್ಟಲಾಗುತ್ತಿದೆ ಎಂಬ ಮೀನುಗಾರ ಧುರೀಣರಾದ ಸುರೇಶ ಬಾನಾವಳಿ ಮತ್ತು ರಾಮಾ ಮೋಗೆರ್‌ ಇವರ ದೂರಿಗೆ ಸ್ಪಂದಿಸಿ ರಾಜ್ಯ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಿಆರ್‌ಜಡ್‌ ಕಾನೂನು ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತನ್ನ ಪತ್ರದಲ್ಲಿ ಹೇಳಿದೆ. ಅಲ್ಲದೇ ಕಡಲತೀರದಲ್ಲಿ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗಿರುವ ಕಾನೂನುಬಾಹೀರ ಕಟ್ಟಡಗಳನ್ನು ಸಹ ಕಿತ್ತೊಗೆಯುವುದಾಗಿ ತಿಳಿಸಿದೆ. ಕಳೆದ ಏಪ್ರಿಲ್‌ನಲ್ಲಿ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಎಸ್‌.ಪೈ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಕಾರವಾರ ಕಡಲತೀರದಲ್ಲಿ ಸಿಆರ್‌ಜಡ್‌ ಕಾಯಿದೆಯ ಉಲ್ಲಂಘನೆಯಾಗುತ್ತಿದೆ. ಕಡಲತೀರದಲ್ಲಿ ಹೋಟೆಲ್‌, ರಾಕ್‌ಗಾರ್ಡನ್‌, ಮೀನು ಮಾರುಕಟ್ಟೆ, ಖಾಸಗಿ ಬಸ್‌ ತಂಗುದಾಣ, ಬಹುಮಹಡಿ ಕಟ್ಟಡ ಕಟ್ಟಲಾಗುತ್ತಿದೆ ಎಂದು ನೋಟಿಸ್‌ ನೀಡಿದ್ದರು. ಅವರ ನೋಟಿಸ್‌ಗೆ ಸ್ಪಂಧಿಸಿದ ಇಲಾಖೆ ಸಿಆರ್‌ಜಡ್‌ ಇಲಾಖೆಗೆ ಈ ದೂರಿನ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು. ಅಲ್ಲದೇ ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಕರಿಂದಲೂ ಸಹ ಕಟ್ಟಡ ಕಾಮಗಾರಿಗೆ ಪರವಾನಿಗೆ ನೀಡಿರುವ ಬಗ್ಗೆಯೂ ಸಹ ಮಾಹಿತಿ ನೀಡುವಂತೆ ತಿಳಿಸಿತ್ತು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ಕಡಲತೀರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಸವಿವರವಾದ ವರದಿಯನ್ನು ಸಲ್ಲಿಸಿದ್ದರು. ಆ ವರದಿಯಲ್ಲಿ ಡಾ.ರವೀಂದ್ರನಾಥ ಟಾಗೋರ್‌ ಕಡಲತೀರಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಕಡಲತೀರದಲ್ಲಿ ಸಿಆರ್‌ಜಡ್‌-1 ಮತ್ತು ಸಿಆರ್‌ಜಡ್‌-2 ವಲಯದಲ್ಲಿ ರಾಕ್‌ಗಾರ್ಡನ್‌ ನಿರ್ಮಾಣ ಮಾಡಲು ಬೀಚ್‌ನು ಹಸ್ತಾಂತರಿಸಿದೆ. ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಕಡಲತೀರದ ಇನ್ನೊಂದು ಭಾಗದಲ್ಲಿ ಮಯೂರ ವರ್ಮ ವೇದಿಕೆಯ ಹಿಂಭಾಗದಲ್ಲಿಯ ಡ್ರೈವ್‌ ಇನ್‌ ಹೋಟೆಲ್‌ನವರು ಸಿಆರ್‌ಜಡ್‌-1 ಮತ್ತು ಸಿಆರ್‌ಜಡ್‌-2 ಕಾನೂನನ್ನು ಉಲ್ಲಂಘಿಸಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಿದ್ದಾರೆಂದು ವರದಿಯಲ್ಲಿ ಹೇಳಿದೆ. ಕಡಲತೀರದ ಇನ್ನೊಂದು ಭಾಗದಲ್ಲಿ ಅಜ್ವಿ ಓಶೀಯನ್‌ ಎಂಬ ಹೆಸರಿನ ಬ್ರ್ಯಾಂಡೆಂಡ್‌ ಫುಡ್‌ ಕೋರ್ಟ್‌ನ್ನು ಸಹ ಸಿಆರ್‌ಜಡ್‌ ನಿಯಮ ಮೀರಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಚಿತ್ತಾಕುಲ ವ್ಯಾಪ್ತಿಯಲ್ಲಿ ಹಾಸ್ಟೇಲ್‌ ಕಟ್ಟಡ, ಸಾಹಸ ಕ್ರೀಡೆಯ ಕಟ್ಟಡಗಳನ್ನು ಸಿಆರ್‌ಜಡ್‌-3 ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಈ ಬಗ್ಗೆ ಈಗಾಗಲೇ ಡಾ.ರವೀಂದ್ರನಾಥ ಟಾಗೋರ್‌ ಕಡಲತೀರಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಗೆ, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹಾಗೂ ನಗರಸಭೆ ಆಯುಕ್ತರಿಗೆ ಸಹ ಕರ್ನಾಟಕ ರಾಜ್ಯ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ನೋಟಿಸ್‌ ನೀಡಿದೆ.

loading...