ಕಳಪೆ ಕಾಮಗಾರಿ-ಸರ್ಕಾರಿ ಹಣ ಪೋಲು: ಮಂಜುನಾಥ ಆರೋಪ

0
18
loading...

ಕನ್ನಡಮ್ಮ ಸುದ್ದಿ-ಬ್ಯಾಡಗಿ: ಪಟ್ಟಣದ ಆಶ್ರಯ ಬಡಾವಣೆ ಕಾಮಗಾರಿಗಳು ಕಳಪೆಯಾಗಿದ್ದು, ಸಹಾಯಕ ಇಂಜಿನೀಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದೆ, ಕಚೇರಿಯಲ್ಲಿ ಬಿಲ್ ಪಾಸು ಮಾಡುತ್ತಾರೆ ಎಂದು ಮಂಜುನಾಥ ಬೋವಿ ಪುರಸಭೆಯಲ್ಲಿ ಆರೋಪಿಸಿದರು.

ಕಾಮಗಾರಿಗಳು ಗುಣಮಟ್ಟವಾಗದೆ, ಸರ್ಕಾರದ ಕೋಟಿಗಟ್ಟಲೇ ಹಣ ಪೋಲಾಗಲಿದ್ದು, ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಇಂಜಿನೀಯರ್ ನಿರ್ಮಲಾ ನಾಯಕ, ಪಟ್ಟಣದ ಎಲ್ಲ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ತೆರಳಿ ವೀಕ್ಷಿಸಿರುವೆ. ಗುತ್ತಿಗೆದಾರರು ಕಳಪೆ ಕಂಡುಬಂದಲ್ಲಿ ಅನುದಾನ ತಡೆಹಿಡಿಯುವುದಾಗಿ ತಿಳಿಸಿದರು.
ಸದಸ್ಯೆ ನೀಲವ್ವ ದೊಡ್ಡಮನಿ ಇಲ್ಲಿನ ಪಟ್ಟಣದ ಬಡಫಲಾನುಭಗಳು ನಿರ್ಮಿಸಿಕೊಂಡ ಶೌಚಗೃಹ ಕಟ್ಟಡಗಳಿಗೆ, ಏಳೆಂಟು ತಿಂಗಳಿಂದ ಅನುದಾನ ಮಂಜೂರಾಗಿಲ್ಲ, ಹೀಗಾಗಿ ಪ್ರತಿನಿತ್ಯ ಪುರಸಭೆ ಹಾಗೂ ಬ್ಯಾಂಕಗಳಿಗೆ ಓಡಾಡುವಂತಾಗಿದೆ ಎಂದರು.

ಪ್ರತಿಕ್ರಿಯಿಸಿದ ಅಧ್ಯಕ್ಷ ಬಸವರಾಜ ಛತ್ರದ, ಸರ್ಕಾರದ ಮಟ್ಟದಲ್ಲಿ ಅನುದಾನ ಕೊರತೆ ತಲೆದೋರಿದ್ದು, ಕೂಡಲೆ ಮಂಜುರಾತಿಗೆ ಒತ್ತಾಯಿಸುವೆ ಎಂದು ಭರವಸೆ ನೀಡಿದರು.
ಸದಸ್ಯೆ ಶಾಂತಮ್ಮ ಕುರಕುಂದಿ ಮಾತನಾಡಿ, ನೂರಾರು ವರ್ಷಗಳಿಗೂ ಹಿಂದೆ, ಸರ್ಕಾರಿ ಜಾಗೆಯಲ್ಲಿ ಮನೆನಿರ್ಮಿಸಿಕೊಂಡ ಸುಭಾಸ ನಗರ, ವಾಲ್ಮೀಕಿ ನಗರ, ಹಳೆಮೆಣಸಿನಕಾಯಿ ಪೇಟೆಯ ನಿವಾಸಿಗಳ ಜಾಗೆಗಳನ್ನು ಸಕ್ರಮಗೊಳಿಸಿಲ್ಲ. ಅನುಕೂಲ ಮಾಡಿಕೊಡಿ ಎಂದರು.

ಅಧ್ಯಕ್ಷ ಪ್ರತಿಕ್ರಿಯಿಸಿ, ಪ್ರಸ್ತಾವನೆ ಹಂತದಲ್ಲಿದೆ ಎಂದು ಉತ್ತರಿಸಿದರು. ಪುರಸಭೆ ಸದಸ್ಯ ಮಲ್ಲಗೌಡ್ರ ಭದ್ರಗೌಡ್ರ ಮಾತನಾಡಿ, ನೂರಾರು ವರ್ಷದ ಹಿಂದೆ ಇಲ್ಲಿನ ಜಗದ್ಗುರು ಜಯದೇವ ಮುರುಘರಾಜೇಂದ್ರ ಶ್ರೀಗಳು, ಸರ್ಕಾರಿ ಪ್ರೌಢಶಾಲೆ ಹಾಗೂ ಕ್ರೀಡಾಂಗಣಕ್ಕೆ ಸುಮಾರು 10 ಎಕರೆ ಜಾಗೆನೀಡಿದ್ದಾರೆ. ಈಗಿನ ತಾಲೂಕು ಕ್ರೀಡಾಂಗಣ ಹಾಗೂ ರಂಗಮಂದಿರಕ್ಕೆ ಜಗದ್ಗುರುಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.
ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಪುರಸಭೆ ಉಪಾಧ್ಯಕ್ಷೆ ಸುಧಾ ಕಳ್ಯಾಳ, ಮುರಿಗೆಪ್ಪ ಶೆಟ್ಟರ, ಶಾಂತಮ್ಮ ಬೇವಿನಮಟ್ಟಿ, ದ್ರಾಕ್ಷಾಯಿಣಿ ಪಾಟೀಲ, ಜುಲೇಖಾಬಿ ಹುರಕಡ್ಲಿ, ಪ್ರಶಾಂತ ಯಾದವಾಡ, ಎಲ್ಲಮ್ಮ ಡಾವಣಗೇರಿ, ಮುಕ್ತಿಯಾರ್ ಅಹ್ಮದ್ ಮುಲ್ಲಾ, ರಾಮಣ್ಣ ಕೋಡಿಹಳ್ಳಿ, ದುಗೇಶ ಗೋಣೆಮ್ಮನವರ, ರಾಜೇಸಾಬ ಕನವಳ್ಳಿ. ಬಸವರಾಜ ಹಂಜಿ, ಅಬ್ದುಲ್ ಮುನಾಫ್‍ಸಾಬ ಎರೇಸಿಮೆ, ನಾರಾಯಣ ಭಜಂತ್ರಿ, ರೋಹಿಣಿ ಹುಣಸೀಮರದ, ಯಮನೂರಪ್ಪ ಉಜನಿ, ರತ್ನಮ್ಮ ಬೂದಿಹಾಳಮಠ, ಮಲ್ಲನಗೌಡ್ರ ಭದ್ರಗೌಡ್ರ, ಮಜೀದ್ ಮುಲ್ಲಾ ಇದ್ದರು.

loading...