ಕಾಡು ಹಣ್ಣುಗಳ ಮೇಳ ಆಯೋಜನೆ

0
47
loading...

ಕನ್ನಡಮ್ಮ ಸುದ್ದಿ-ಶಿರಸಿ: ಪಶ್ಚಿಮಘಟ್ಟದ ಕಾಡುಗಳು ಜೀವ ವೈವಿಧ್ಯದ ಆಗರವಾಗಿದ್ದು, ಆದರೆ ಇತ್ತೀಚೆಗೆ ಅರಣ್ಯ ನಾಶ ಮಿತಿಮೀರುತ್ತಿರುವ ಹಾಗೂ ಕಾಡಿನೆಡೆ ಯುವಕರ ಪ್ರೀತಿ ಕಡಿಮೆಯಾಗುತ್ತಿರುವುದರ ಪರಿಣಾಮ ಕಾನನದಲ್ಲಿ ದೊರೆಯುವ ಹಣ್ಣುಗಳು ಕೈಗೆ ನಿಲುಕದ ಹಾಗೇ ಮರೆಯಾಗುತ್ತಿವೆ. ಹೀಗೆ ವಿನಾಶದತ್ತ ಸಾಗುತ್ತಿರುವ ವನಫಲಗಳ ತಳಿಗಳ ಬಗ್ಗೆ ಜನಜಾಗೃತಿ ಹಾಗೂ ಆಸಕ್ತಿ ಮೂಡಿಸಲು ಶಿರಸಿಯಲ್ಲಿ ಶುಕ್ರವಾರ ಕಾಡು ಹಣ್ಣುಗಳ ಮೇಳ ಆಯೋಜಿಸಲಾಗಿತ್ತು.
ಶಿರಸಿಯ ಅರಣ್ಯ ಕಾಲೇಜು, ಅರಣ್ಯ ಇಲಾಖೆ ಹಾಗೂ ಯೂಥ್ ಫಾರ್ ಸೇವಾ ವತಿಯಿಂದ ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಮೇಳದಲ್ಲಿ ಪಶ್ಚಿಮ ಘಟ್ಟದಲ್ಲಿರುವ ಬಹುತೇಕ ಕಾಡು ಹಣ್ಣು ಮತ್ತು ಸಸ್ಯ ಸಂಪನ್ಮೂಲಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೇಳದಲ್ಲಿ ಪಶ್ಚಿಮಘಟ್ಟದಲ್ಲಿ ಲಭ್ಯವಿರುವ 170 ಜಾತಿಯ ಕಾಡುಹಣ್ಣುಗಳಲ್ಲಿ ಸುಮಾರು 130 ಜಾತಿಯ ಕಾಡುಹಣ್ಣುಗಳ ಪ್ರದರ್ಶನ ನಡೆಯಿತು. ಕಾಡುಹಣ್ಣುಗಳ ವಿವಿಧ ಪ್ರಕಾರಗಳಾದ ಬೇಲ, ಅಂಕೋಲೆ, ಅಲೆ ಹಣ್ಣು, ಉಪ್ಪಾಗೆ,ಇಳ್ಳಿ, ಕಾಡುಹಿಪ್ಪೆ, ಹೊಳೆ ತುಮರಿ, ಗುಡ್ಡೆ ಕಣಿಗಿಲೆ ಗಿಡ್ಡ ರಾಮಪತ್ರೆ, ನೇರಳೆ, ಕೆಂಪು ಮುರಗಲು, ದ್ಯಾವಣಗಿ, ಅಂಜೂರ, ಉಪ್ಪಾಗೆ, ಅತ್ತಿ, ಕೂಗಲಬಳ್ಳಿ, ಪೇರಲ, ಮಾವು, ಅನಲೆ ಕಾಯಿ, ಕುಂಟ ನೇರಳೆ, ಕವಳಿ, ಈಚಲು, ಸಾಲದೂಪ, ಹೆಡಮಂಗಲ, ಸುರಗಿ, ಕಾಡುಬದನೆ, ಬಿಳಿಸೂಲಿ, ತಟ್ಟೆಲೆ ಮರದ ಬೀಜ, ದಾಲ್ಚಿನಿ ಬಿಕ್ಕೆ, ತುಮರಿ, ಬಲಗಿ, ಹುಳಜ್ಜಿಗೆ, ರಂಜಲು, ಆರಚಿಟ್ಟಿ, ಕೇಪುಳದ ಹಣ್ಣು, ಹೊಳಗೆರೆ, ಸಿಂಬುಳದ ಹಣ್ಣು, ಚಳ್ಳೆ, ಕರಮದ್ಲೆ, ಚಳ್ ಕಾಯಿ, ನೀರು ಸೇಬು, ಶಿವಣೆ, ಜ್ಯೋತಷ್ಪತಿ, ಕನಗಲ ಹೀಗೆ ಅನೇಕ ಹಣ್ಣುಗಳು ಅವನತಿಯ ಅಂಚಿನಲ್ಲಿನ ಹಲವು ವನಫಲಗಳನ್ನು ಪ್ರದರ್ಶಿಸಲಾಯತು. ಜೊತೆಗೆ ವಿವಿಧ ಜಾತಿಯ ಹಣ್ಣುಗಳ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿರಸಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ದೇಶದಲದಲಿ ಸಾಕಷ್ಟು ಕಾಡುಹಣ್ಣುಗಳು ಲಭ್ಯವಿವೆ. ಸಿಂಗಳಿಕ, ಹಾರ್ನ್‍ಬಿಲ್‍ನಂತ ವಿಶೇಷ ಜೀವಿಗಳು ನೆಲ ಸ್ಪರ್ಷಿಸದೇ ಜೀವಿತಾವಧಿಯನ್ನು ಮರದ ಮೇಲೆ ಇದ್ದುಕೊಂಡು ಕಳೆಯುವಷ್ಟು ಹಣ್ಣಿನ ಗಿಡಮರಗಳಿವೆ. ಔಷಧೀಯ ಸಸ್ಯಗಳು ಹಾಗೂ ಕಾಡುಹಣ್ಣುಗಳ ಹೆಚ್ಚನ ಮೂಲ ಅರಣ್ಯವೇ ಆಗಿದೆ. ಹಾಗಾಗಿ ಅವುಗಳ ಸುಸ್ಥಿರ ಕೊಯ್ಲು ಮಾಡಬೇಕು. ಪರಿಸರ ನಾಶವಾಗದಂತೆ ಬಳಕೆ ಮಾಡಬೇಕು. ಕಾಡಿನ ಉತ್ಪನ್ನಗಳ ವಿಷಯದಲ್ಲಿ ಅರಣ್ಯದ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ ಗ್ರಾಮ ಅರಣ್ಯ ಸಮಿತಿಗಳ ಮೂಲಕ ಹೆಚ್ಚಿನ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಉಪ್ಪಾಗೆ, ಮುರುಗಲು ಸೇರಿದಂತೆ ಹಲವು ಕಾಡಿನ ಉತ್ಪನ್ನಗಳ ಜಿಲ್ಲೆಯಿಂದ ಹೊರಗೆ ಹೆಚ್ಚು ರಪ್ತಾಗುತ್ತಿದೆ. ಇದು ಹಾಗಾಗದೇ ಸ್ಥಳೀಯವಾಗಿ ಬಳಕೆ ಹೆಚ್ಚಿಸಬೇಕು. ಮೌಲ್ಯವರ್ಧನೆ ಮಾಡಿದರೆ ಸ್ಥಳಿಯರಿಗೇ ಆದಾಯವಾಗುತ್ತದೆ ಎಂದರು. ಕಾಡುಹಣ್ಣು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಗತ್ಯವಿರುವವರಿಗೆ ಗಿಡ ಬೆಳೆಸಿಕೊಡಲು ಸಿದ್ಧವಿದೆ. ಕಾಡು ಹಣ್ಣುಗಳ ಬಳಕೆ, ಮೌಲ್ಯವರ್ಧನೆ ಹಾಗೂ ಸಂರಕ್ಷಣೆ ಆಗಬೇಕು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಕಾಡು ಹಣ್ಣುಗಳ ದಿನ ವಿಶೇಷವಾಗಿದೆ ಎಂದರು.
ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಪಶ್ಚಿಮಘಟ್ಟದಲ್ಲಿ ಕಾಡುಹಣ್ಣುಗಳು ಮತ್ತು ಜನಜೀವನ ಒಂದಕ್ಕೊಂದು ಜೋಡಿಸಿಕೊಂಡಿವೆ. ಆದರೆ ಕಾಡುಹಣ್ಣುಗಳು ನಶಿಸುತ್ತಿವೆ. ಇದು ಅರಣ್ಯ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು. ವಿಭಾಗ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚಿನ ಕಾಡುಹಣ್ಣುಗಳ ಗಿಡ ಬೆಳೆಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿರಸಿ ಡಿಎಫ್‍ಓ ಎನ್.ಡಿ.ಸುದರ್ಶನ, ಪರಿಸರ ತಜ್ಞ ಪ್ರಕಾಶ ಭಟ್ಟ, ಪ್ರೊ.ಆರ್. ವಾಸುದೇವ ಉಪಸ್ಥಿತರಿದ್ದರು.

loading...