ಕುಡಿತದ ಚಟದಿಂದ ಮುಕ್ತರಾಗಿ ನವಜೀವನ ಕಟ್ಟಿಸಿಕೊಳ್ಳಿ: ಶಾಸಕ ದಿನಕರ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಮಧ್ಯವರ್ಜನ ಶಿಬಿರಗಳ ಮೂಲಕ ಎಲ್ಲರೂ ಸಂಪೂರ್ಣ ಕುಡಿತದ ಚಟದಿಂದ ಮುಕ್ತರಾಗಿ ನವಜೀವನ ಕಟ್ಟಿಸಿಕೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ 1204ನೇ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕುಡಿತದ ಚಟದಿಂದ ಕುಟುಂಬದ ಹಿತಾಸಕ್ತಿ ಕಡೆಗಣಿಸಲಾಗುತ್ತದೆ. ಹೀಗಾಗಿ ಅಂತಹ ಕುಟುಂಬಗಳು ಸದಾ ಸಂಕಷ್ಟದಲ್ಲಿರುತ್ತವೆ. ಮದ್ಯವರ್ಜನ ಶಿಬಿರಗಳ ಮೂಲಕ ಎಲ್ಲರೂ ಸಂಪೂರ್ಣ ಚಟದಿಂದ ಮುಕ್ತರಾಗಿ ನವಜೀವನ ಕಟ್ಟಿಕೊಳ್ಳಬೇಕು. ಶಿಬಿರದ ತ್ಯಾಗ ಮನೋಭಾವನೆಯನ್ನು ಎಂದೂ ಮರೆಯಬಾರದು. ಕಳೆದು ಹೋದದ್ದು ಕೆಟ್ಟದ್ದೆಂದು ಬಿಟ್ಟು ಮುಂಬರುವುದು ಒಳ್ಳೆಯದೆಂದು ಸ್ವೀಕರಿಸಬೇಕು. ಭವಿಷ್ಯದಲ್ಲಿ ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಕಾಲ ಕಳೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕೆನರಾ ಹೆಲ್ತ್ ಕೇರ್‍ನ ಖ್ಯಾತ ಸ್ತ್ರೀರೋಗ ತಜ್ಞ ಡಾ ಜಿ ಜಿ ಹೆಗಡೆ ಮಾತನಾಡಿ, ಯಾರೂ ಹುಟ್ಟಿನಿಂದ ಚಟ, ಹವ್ಯಾಸ ಮಾಡಿಬಂದವರಿಲ್ಲ. ಮನುಷ್ಯ ಎಂದೂ ಕೆಟ್ಟವನಲ್ಲ. ಆದರೆ ಪರಿಸ್ಥಿತಿ, ಸಮಯ ಬಹು ಕೆಟ್ಟದ್ದು. ಪರಿಸ್ಥಿತಿಯ ಪ್ರಕೋಪಕ್ಕೆ ಜನರು ಬಲಿಯಾಗುತ್ತಾರೆ. ಮನುಷ್ಯ ಜೀವನದಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲವೆಂದಲ್ಲ. ಹೀಗಿರುವಾಗ ಮದ್ಯ ವ್ಯಸನ, ಚಟ ಬಿಡುವುದು ದೊಡ್ಡ ಸಾಹಸವೇನೂ ಅಲ್ಲ. ಮನಸ್ಸು ಬೇಕು. ತಮ್ಮ ಕುಟುಂಬದ ಬಗ್ಗೆ ಪ್ರೀತಿ, ವಿಶ್ವಾಸ ಇರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರಗಳ ಮೂಲಕ ಜನರನ್ನು ಪಾನಮುಕ್ತರನ್ನಾಗಿಸುತ್ತಿರುವುದು ಬಹುದೊಡ್ಡ ಸಾಮಾಜಿಕ ಕೆಲಸ. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಸುಖ ಜೀವನದೆಡೆ ಮುಖ ಮಾಡಬೇಕು. ಕುಟುಂಬದ ಸದಸ್ಯರಿಗೆ ನೆಮ್ಮದಿಯ ಬದುಕು ನೀಡಬೇಕು ಎಂದರು.
ನಾಗೇಶ ಅವರು ಪ್ರಾಸ್ತಾವಿಕ ಮಾತನಾಡಿ, ಕೂಜಳ್ಳಿಯಲ್ಲಿ 7 ದಿನಗಳ ಕಾಲ ನಡೆದ ಶಿಬಿರದಲ್ಲಿ 67 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಇವುಗಳಲ್ಲಿ 10 ಜನ ಜೈಲಿಗೆ ಹೋಗಿ ಬಂದವರು. ಮನೆ ಪಾತ್ರೆ ಮಾರಾಟ ಮಾಡಿ ಕುಡಿದವರು. 48 ಜನರು ಪುಡಿಕಾಸು ಇಲ್ಲದೇ ಅಲ್ಲಲ್ಲಿ ಅಲೆದಾಡುವವರು. 18 ಜನ ಕಳ್ಳತನ ಮಾಡಿ ಕುಡಿಯುವವರು. 45 ಜನ ಜೂಜಾಟ ಆಡುತ್ತಿರುವವರು. 10 ಜನ ಅಡಿಗೆ ಮಾಡುವವರು ಇದ್ದಾರೆ ಎಂದರು.

ಕೆ ವಿ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೆರಿಗೆ ಸಲಹೆಗಾರ ಎಮ್ ಕೆ ಹೆಗಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಶಂಕರ ಶೆಟ್ಟಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಟಿ ಜಿ ಭಟ್, ವಕೀಲೆ ಮಮತಾ ನಾಯ್ಕ, ಶರಾವತಿ ಭಟ್ಟ, ವಿ ಐ ಹೆಗಡೆ, ವಿ ಎಮ್ ಭಟ್, ಪ್ರಕಾಶ ನಾಯಕ, ಮೋಹನ ಭಾಗ್ವತ, ಎಸ್ ವಿ ಭಟ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...