ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ; ಅಧಿಕಾರಿಗಳಿಗೆ ರಾಜುಗೌಡ ಸೂಚನೆ

0
17
loading...

ಕನ್ನಡಮ್ಮ ಸುದ್ದಿ-ನರಗುಂದ: ಹತ್ತಿ ಬೆಳೆ ಬೆಳೆಯಲು ರೈತರು ಸೂಕ್ತ ವಿಧಾನ ಅನುಸರಿಸದೇ ಇರುವುದರಿಂದ ಹತ್ತಿಯಲ್ಲಿ `ಗುಲಾಬಿ ಕಾಯಿಕೊರಕದ’ ರೋಗಾಣು ಬೆಳೆಯುತ್ತದೆ. ಇದನ್ನು ಹತೋಟಿಗೆ ತರಲು ರೈತರು ಮಾಡಬೇಕಾದ ಮುಂಜಾಗ್ರತೆ ಕ್ರಮದ ಕುರಿತು ಕೃಷಿ ಇಲಾಖೆ ಹೊರತಂದ ಕಿರು ಕೈಪಿಡಿಯನ್ನು ಇಲ್ಲಿನ ತಾಪಂ ಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಆರೋಗ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಕುಡಿಯುವ ನೀರಿನ ಯೋಜನೆಗೆ ಯಾವುದೇ ತೊಂದರೆ ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಜಿಪಂ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ತಾಲೂಕಿನ ಕೊಣ್ಣೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡುವುದನ್ನು ಬಿಟ್ಟು ನೀರು ಪುರೈಕೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಟಾಸ್ಕ ಪೋಸ್ ಯೋಜನೆಯ ಸೌಲಭ್ಯ ಪಡೆದು ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೊಣ್ಣೂರಿ ಗ್ರಾಮದಲ್ಲಿ ನಾಲ್ಕು ಕುಡಿಯುವ ನೀರಿನ ಘಟಕಗಳಿವೆ ಅದರಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ನೀರು ಸಂಗ್ರಹಿಸುವ ಟ್ಯಾಂಕ್‍ಗಳಿಗೆ ಎರಡು ದಿನಕ್ಕೊಮ್ಮೆ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಎರಡು ಗಂಟೆ ಮಾತ್ರ ನೀರು ಸರಬರಾಜು ಆಗುವುದರಿಂದ ಗ್ರಾಮದ ಎಲ್ಲ ಮನೆಗಳಿಗೆ ನೀರಿನ ಸೌಕರ್ಯ ಒದಗುತಿಲ್ಲ. ಈ ಸಮಸ್ಯೆಯನ್ನು 15 ದಿನಗಳ ಒಳಗಾಗಿ ಪರಿಹರಿಸಬೇಕು. ಇದಕ್ಕೆ ಸಂಬಂಧಿಸಿದ ಸೂಕ್ತ ವರದಿಯನ್ನು ಸಿದ್ದಪಡಿಸಿ ತಾಪಂಗೆ ಸಲ್ಲಿಸಲು ತಾಪಂ ಪ್ರಭಾರಿ ಇಒ ಎಂ.ವ್ಹಿ ಚಳಗೇರಿ ಜಿಪಂ ಸಹಾಯಕ ಅಭಿಯಂತರರಿಗೆ ಸೂಚಿಸಿದರು.

ಜಿಪಂ ಇಂಜನೀಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಪೊಲೀಸ್ ಪಾಟೀಲ ಮಾತನಾಡಿ, ನೀರಿನ ಸಮಸ್ಯೆ ಇರುವ ಭಾಗದ ಎಲ್ಲ ಗ್ರಾಮಗಳನ್ನು ಪರಿಶೀಲಿಸಿ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.
ಲೋಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರ ಸತೀಶ ನಾಗನೂರ ಮಾತನಾಡಿ, ಚಳ್ಳಕೇರಿ ಮಾರ್ಗದ ರಸ್ತೆಯನ್ನು ಉತ್ತಮ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಂದನೂರ-ಹೆಮ್ಮಡಗಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮೇಲ್ಬಾಗದ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಹದಲಿ ಗ್ರಾಮದಲ್ಲಿ ಅಂಬೇಡ್ಕರ ಮತ್ತು ಬಾಬೂ ಜಗಜೀವನರಾಮ ಭವನ ನಿಮಾರ್ಣಕ್ಕೆ ಸ್ಥಳದ ಕೊರತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದರಿಂದ ಸಭೆಯಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ತಾಪಂ ಅಧ್ಯಕ್ಷ ಪ್ರಭು ಯಲಿಗಾರ, ಜಾಗೆ ಇದೆ ಎಂದು ಗ್ರಾಪಂ ಪಿಡಿಒ ಹಾಗೂ ಗ್ರಾಪಂ ಸದಸ್ಯರು ತಿಳಿಸಿದ್ದಾರೆ. ಇನ್ನೊಮ್ಮೆ ಅವರಿಗೆ ಪತ್ರ ಬರೆದು ಜಾಗೆ ಪಡೆದು ಅಲ್ಲಿ ಭವನ ನಿರ್ಮಿಸುವ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶುದ್ದ ಕುಡಿಯುವ ನೀರಿನ ಘಟಕಗಳು ಕೆಲ ಗ್ರಾಮಗಳಲ್ಲಿ ಸರಿಯಾಗಿ ನಡೆಯುತ್ತಿಲ್ಲವೆಂದು ದೂರುಗಳಿಗೆ. ಭೂಸೇನಾ ಇಲಾಖೆಯವರು ಈ ಸಮಸ್ಯೆ ಪರಿಹರಿಸಿ ನೀರಿನ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆ ಮತ್ತು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆಗಳ ಪ್ರಗತಿ ವರದಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ತಾಪಂ ಪ್ರಭಾರಿ ಇಒ ಎಂ.ವ್ಹಿ ಚಳಗೇರಿ, ತಾಪಂ ಅಧ್ಯಕ್ಷ ಪ್ರಭು ಯಲಿಗಾರ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ತಾಪಂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಿ. ಸಿರಿಯಪ್ಪಗೌಡ್ರ, ತಾಪಂ ಸದಸ್ಯರಾದ ಈರವ್ವ ಜೋಗಿ, ವಿಠಲ ತಿಮ್ಮರಡ್ಡಿ, ಗಿರೀಶ ನೀಲರಡ್ಡಿ, ಅಣ್ಣಪೂರ್ಣ ಹೋಗಾರ, ಶಂಕ್ರವ್ವ ಮುದ್ದನಗೌಡ್ರ, ಪಾರ್ವತಿ ಸೋಮಾಪೂರ, ಹನುಮವ್ವ ಮರಿಯಣ್ಣವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


ತಾಲೂಕಿನ ವಿವಿಧ ಶಾಲೆಗಳಲ್ಲಿ 11,535 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತಿದ್ದು ಅವರಿಗೆಲ್ಲ ಮಧ್ಯಾಹ್ನದ ಬಿಸಿಯೂಟದ ಯೋಜನೆ ಮುಂದುವರೆಸಲಾಗಿದೆ. ಶಾಲಾ ಮಕ್ಕಳಿಗೆ ನಿತ್ಯ ಪೂರೈಸುವ ಹಾಲಿನ ಫೌಡರ್ ಇನ್ನು ಲಭ್ಯವಿಲ್ಲದ ಕಾರಣ ಸದ್ಯ ಹಾಲು ವಿತರಣೆ ಸ್ಥಗಿತವಾಗಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.

ಪ್ರಕಾಶ ರಾಠೋಡ, ಅಕ್ಷರ ದಾಸೋಹ ಅಧಿಕಾರಿ

loading...