ಕೆಂಪೇಗೌಡರು ಸುವ್ಯವಸ್ಥಿತ ನಗರ ಯೋಜನೆಯ ಶಿಲ್ಪಿ: ಪೋಳ

0
17
loading...

ಕನ್ನಡಮ್ಮ ಸುದ್ದಿ-ವಿಜಯಪುರ: ನಾಡಪ್ರಭು ಕೆಂಪೇಗೌಡರು ಸುವ್ಯವಸ್ಥಿತ ನಗರ ಯೋಜನೆಯ ಶಿಲ್ಪಿ. ಅವರ ವಿಚಾರಗಳು ನಮಗೆ ಮಾದರಿ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸಂಗೀತಾ ಪೋಳ ಹೇಳಿದರು.
ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
2015ರಲ್ಲಿಯೇ ಸಮುದಾಯದವರಿಂದ ಕೆಂಪೇಗೌಡರ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಮನವಿ ಬಂದಿತ್ತು. ಆ ಕುರಿತು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಿಂದಗಿಯ ಎಸ್‌.ಜಿ.ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎ.ಆರ್‌. ಹೆಗ್ಗನದೊಡ್ಡಿ ಉಪನ್ಯಾಸ ನೀಡಿದ ಅವರು, ಕೆಂಪೇಗೌಡರ ಜೀವನ ಚರಿತ್ರೆ ಮತ್ತು ಸಾಧನೆ ಕುರಿತು ಮಾತನಾಡುತ್ತ, ಕೆಂಪೇಗೌಡರು ಜಾತ್ಯಾತೀತ, ಧರ್ಮಾತೀತ ವ್ಯಕ್ತಿಯಾಗಿದ್ದರು. ಪರಿಸರ ಪ್ರೇಮಿ, ವಿಚಾರವಾದಿ, ಮೌಢ್ಯ ವಿರೋಧಿ, ದಕ್ಷ ಆಡಳಿತಗಾರರಾಗಿದ್ದರು. ದೂರದೃಷ್ಟಿಯಿಂದ ರಸ್ತೆ, ಉದ್ಯಾನ, ದೇವಸ್ಥಾನ ಸೇರಿದಂತೆ ಸುವ್ಯವಸ್ಥಿತ ನಗರ ಯೋಜನೆಗೆ ಬೇಕಾದ ಎಲ್ಲ ಅಂಶಗಳನ್ನು ಹೊಂದಿದ ನಕ್ಷೆ ತಯಾರಿಸಿ 1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂದು ಹೇಳಿದರು.
ಪ್ರಪಂಚದ ಬಹುತೇಕ ಜನರು ತಮ್ಮ ವಿಶ್ರಾಂತಿ ಜೀವನವನ್ನು ಬೆಂಗಳೂರಿನಲ್ಲಿ ಕಳೆಯಲು ಬಯಸುತ್ತಾರೆ. ಇದಕ್ಕೆ ಕಾರಣ ಬೆಂಗಳೂರಿನ ಪರಿಸರ. ಗಿಡ-ಮರಗಳಿಂದ ಕೂಡಿದ ಸುಂದರ ಉದ್ಯಾನ ನಗರಿಗೆ ಮೂಲ ಕಾರಣ ಕೆಂಪೇಗೌಡರು ಎಂದು ಹೇಳಿದರು.
ಸುರಕ್ಷತೆಗಾಗಿ ಕೋಟೆಗಳ ನಿರ್ಮಾಣ, ಸಮುದಾಯಗಳ ವ್ಯಾಪಾರಕ್ಕಾಗಿ ಪೇಟೆಗಳ ನಿರ್ಮಾಣ, ಧಾರ್ಮಿಕ ವರ್ಗದವರಿಗೆ ವಿವಿಧ ದೇವಾಲಯಗಳು ಸೇರಿದಂತೆ ಇಂದು ಜಗತ್ತಿನಲ್ಲಿ ಸಿಲಿಕಾನ್‌ ಸಿಟಿ ಉದ್ಯಾನ ನಗರಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಎಂದು ಹೇಳಿದರು.
ಆ ಕಾಲದಲ್ಲಿಯೇ ಗ್ರಾಮ ಪಂಚಾಯತ್‌ಗಳನ್ನು ರಚಿಸಿ ಅಧಿಕಾರ ವಿಕೇಂದ್ರಿಕರಣದ ಕಲ್ಪನೆಯನ್ನು ಹಾಕಿಕೊಟ್ಟರು. ಅವರ ಆಡಳಿತ ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು. ಅವರ ಆದರ್ಶಗಳನ್ನು ಸಾಧನೆಗಳನ್ನು ವಿದ್ಯಾರ್ಥಿಗಳು ಅರಿತು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ರಾಜಶೇಖರ, ಕು.ಪೂಜಾ, ಮಾಳು ಮನಗೂಳಿಯವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲೆಯ 200 ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಶೇಗುಣಸಿ, ಸಮಾಜದ ಮುಖಂಡರಾದ ಕಲ್ಲನಗೌಡ ಪಾಟೀಲ, ಜಿ.ಜಿ.ದೇವೂರ, ಎಸ್‌.ಕೆ.ಜುಮನಾಳ, ಕಾಶಪ್ಪ ಮಸಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರೊ: ನಾಟೀಕಾರ ಸೇರಿದಂತೆ ಸಮುದಾಯದ ಮುಖಂಡರು, ಸಾರ್ವಜನಿಕರು, ಶಾಲಾ ಕಾಲೇಜ್‌ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳೊಂದಿಗೆ ಜರುಗಿದ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್‌. ಇತರರು ಉಪಸ್ಥಿತರಿದ್ದರು.

loading...