ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ದಿನಕರ

0
23
loading...

ಕನ್ನಡಮ್ಮ ಸುದ್ದಿ-ಕಾರವಾರ: ಕುಮಟಾ-ಹೊನ್ನಾವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕುಮಟಾ ಕ್ಷೇತ್ರದ ನೂತನ ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಕುಮಟಾ ಕ್ಷೇತ್ರಕ್ಕೆ ಮಂಜೂರಿಯಾದಂತ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಅಪೂರ್ಣವಾದಂತ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕುಮಟಾದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದ ಶಾಸಕ ದಿನಕರ ಶೆಟ್ಟಿ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆಯಿದೆ. ಈ ಬಗ್ಗೆ ಈಗಾಗಲೇ ಹೆಸ್ಕಾಂ ಅಧಿಕಾರಿಗಳು ಹಾಗೂ ಇಂಜೀನಿಯರಗಳ ಸಭೆ ಕರೆದಿದ್ದೇನೆ ಎಂದರು.

ಕುಮಟಾ ಹಾಗೂ ಹೊನ್ನಾವರದಿಂದ ಹಾದು ಹೋಗಿರುವ ಚತುಷ್ಪಥ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಯಾವುದೇ ಅಡಚಣೆ ಇಲ್ಲವೆಂದು ಸ್ಪಷ್ಟಪಡಿಸಿದ ಶಾಸಕ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಚತುಷ್ಪಥ ಹೆದ್ದಾರಿ ಯೋಜನೆ ಅಕ್ಕಪಕ್ಕವಿರುವ ಖಾಲಿ ಜಮೀನುಗಳನ್ನು ಬಳಸಿಕೊಂಡು ಕಾಮಗಾರಿ ತ್ವರಿತಗೊಳಿಸಬೇಕು. ಭವಿಷ್ಯದಲ್ಲಿ ವಾಹನ ದಟ್ಟಣೆಗಳನ್ನು ಊಹಿಸಿದರೆ ಕುಮಟಾಕ್ಕೆ ಬೈಪಾಸ್ ಅತ್ಯಂತ ಯೋಗ್ಯ. ಬೈಪಾಸ್‍ನಿಂದ ಕುಮಟಾದ ಅಭಿವೃದ್ಧಿ ಸಹ ಸಾಧ್ಯವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಕಳೆದ ನವೆಂಬರ್‍ನಲ್ಲಿ ಚಂದಾವರನಲ್ಲಿ ನಡೆದ ಕೋಮುಗಲಭೆಗೆ ಸಂಬಂಧಪಟ್ಟಂತೆ ಮಾತನಾಡಿದ ಶಾಸಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲ ಯುವಕರು ಮಾರುತಿ ದೇವಸ್ಥಾನದ ಬಳಿ ಗುಮ್ಮಟವನ್ನು ನಿರ್ಮಿಸುವ ಮೂಲಕ ಕೋಮುಗಲಭೆಗೆ ಕುಮ್ಮಕ್ಕು ನೀಡಿದರು ಎಂದು ಆರೋಪಿಸಿದರು. ಅಲ್ಪಸಂಖ್ಯಾತ ಸಮುದಾಯ ಬಹುಸಂಖ್ಯಾತ ಸಮುದಾಯವರ ಭಾವನೆಗಳನ್ನು ಕೆರಳಿಸಿದರೆ ಬಹುಸಂಖ್ಯಾತ ಸಮುದಾಯ ರಕ್ತಪಾತ ನಡೆಸಬಹುದು ಎಂದು ಜಿಲ್ಲಾಡಳಿತಕ್ಕೂ ಸಹ ತಾವು ಎಚ್ಚರಿಕೆ ನೀಡಿದ್ದೇ ಎಂದು ದಿನಕರ ಶೆಟ್ಟಿ ಹೇಳಿದರು.

ರಾಜ್ಯಸರ್ಕಾರ ಅಲ್ಪಾಯುಷಿ: ರಾಜ್ಯದಲ್ಲಿ ಅಧಿಕಾರದಾಸೆಗಾಗಿ ಜೆಡಿಎಸ್ ಹಾಗೂ ಕಾಂಗ್ರೇಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಈ ಸರ್ಕಾರ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಳದು ಎಂದು ಶಾಸಕ ದಿನಕರ ಶೆಟ್ಟಿ ಭವಿಷ್ಯ ನುಡಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯಿಂದ ಸಚಿವ ಸ್ಥಾನದ ಆಕಾಂಕ್ಷಿಯ ತಾನಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು ಬಿಜೆಪಿಯನ್ನು ಐದಾರು ಬಾರಿ ಗೆದ್ದಂತ ಕಾಗೇರಿಯಂಥ ಹಿರಿಯರಿದ್ದಾರೆ. ಅವರೇ ಸಚಿವರಾಗಲಿ ಎಂದು ಶಾಸಕರು ತಾನು ಈ ಬಾರಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದು ಅತ್ಯಂತ ಖುಷಿ ನೀಡಿದೆ. ಈ ಅವಧಿಯನ್ನು ಜನತೆಯ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಸದ್ಯದಲ್ಲಿಯೇ ದೆಹಲಿಗೂ ಸಹ ತೆರಳಿ ಕುಮಟಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯೋಜನೆಗಳನ್ನು ಹಮ್ಮಿಕೊಳ್ಳಲು ಯತ್ನಿಸುತ್ತೇನೆ ಎಂದರು.
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬಗ್ಗೆ ತಮಗೆ ಯಾವುದೇ ನೋವಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು ಒಂದೊಮ್ಮೆ ಜೆಡಿಎಸ್‍ನಲ್ಲಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವನಾಗಬಹುದಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ಸಚಿವನಾಗುವ ಮೊದಲು ಶಾಸಕನಾಗಬೇಕಲ್ಲ. ಶಾಸಕನಾದರೆ ಮಾತ್ರ ಸಚಿವನಾಗಬಹುದು. ಜೆಡಿಎಸ್‍ನಿಂದ ಶಾಸಕನಾಗಿ ಆಯ್ಕೆಯಾಗುವುದು ಅಷ್ಟು ಸುಲಭವಿರಲಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

loading...