ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆ ಅಳವಡಿಸಿಕೊಳ್ಳಿ: ಹೆಗ್ಗೋಡು

0
18
loading...

ಶಿರಸಿ: ವರ್ತಮಾನದ ರಾಜಕಾರಣ, ಸಮಾಜ, ಸಂಸ್ಕೃತಿಗಳು ಅತಿ ನಾಗರೀಕತೆಗಳ ಪರವಾಗಿ ಬೆಳೆಯುತ್ತಿರುವ ವಿಷಮ ಸನ್ನಿವೇಶದಲ್ಲಿ ಪಾರಂಪರಿಕ, ದೇಶೀಯ ಹಾಗೂ ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚರಕ ಸಂಸ್ಥೆ ಮುಖ್ಯಸ್ಥ ಪ್ರಸನ್ನ ಹೆಗ್ಗೋಡು ಹೇಳಿದರು.
ವನಸ್ತ್ರೀ ಸಂಘಟನೆ ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 18ನೇ ಮಲೆನಾಡು ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರಕೃತಿ ಸಂಬಂಧಿತ ಚಟುವಟಿಕೆ ಹಿಂದೆ ಸರಿದಿದೆ. ಯಂತ್ರ ನಾಗರಿಕತೆ ವಾಸ್ತವ ಸಂದರ್ಭದಲ್ಲಿ ವಿಜ್ರಂಭಿಸುತ್ತಿದೆ. ದೇಶಿಯ ಉತ್ಪನ್ನಗಳ ಬಗ್ಗೆ ನಿರ್ಲಕ್ಷ÷್ಯ ಬೆಳೆಯುತ್ತಿದೆ. ಅನಾದಿ ಕಾಲದಿಂದ ಬೇರು ಬಿಟ್ಟ ಈ ಕೆಲಸದ ಜೊತೆಗೆ ಶ್ರಮಿಕ ವರ್ಗವನ್ನು ಸಂಘಟನೆ ಮಾಡುವ ಕಾರ್ಯ ಆಗಬೇಕು ಹಾಗೂ ಅನಾವರಣ ಮಾಡುವ ಕಾರ್ಯವೂ ಆಗಬೇಕು. ಇಂತಹ ಕಾಲಘಟ್ಟದಲ್ಲಿ ಸಭ್ಯತೆ ಮತ್ತು ಪ್ರಕೃತಿ ಒಟ್ಟಾಗಿರುವುದು ಕಷ್ಟಕರವಾಗಿದೆ. ಹಾಗಾಗಿ ಸಮಾಜದ ಸಮಸ್ಯೆಯನ್ನು ರೂಪಕವಾಗಿ ನೋಡಬೇಕು. ಪ್ರತಿಯೊಬ್ಬರು ಅವರವರ ಬಾಳ್ವೆಯನ್ನು ಪ್ರಕೃತಿಯೊಟ್ಟಿಗೆ ಬೆಸೆದು ಸಾಗಬೇಕು ಎಂದರು. ಆಧುನಿಕತೆಯ ಭರಾಟೆಯಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಿಸಿ ಹಣ ಗಳಿಸುವ ಮನಸ್ಥಿತಿ ಹೆಚ್ಚುತ್ತಿದೆ. ಅದರಿಂದ ರಾಜಕೀಯ ಬೆಳೆಸುವ ಕಾರ್ಯವಾಗುತ್ತಿದೆ. ಇದರಿಂದ ದೇಶೀಯತೆ ಮರೆಯಾಗುವ ಆತಂಕವಿದೆ ಎಂದ ಪ್ರಸನ್ನ, ಸಣ್ಣ ಸಮುದಾಯ, ಹಳ್ಳಿಗಳ ಶಕ್ತಿ ಅರಿತು ಸಮಾಜ ಕಟ್ಟಬೇಕು. ಇಂತಹ ಚಟುವಟಿಕೆಗಳಿಗೆ ರಾಜಕೀಯ ಪ್ರಾಮುಖ್ಯತೆ ಸಿಗಬೇಕು. ಮೇಳ ಮಾಡುವ ಜೊತೆಗೆ ಸಮುದಾಯಗಳ ಸಂಘಟಿಸುವ ಕೆಲಸ ಬಿಡದೆ ನಿರಂತರವಾಗಿ ಮುನನುಗ್ಗಬೇಕು. ಸಮಾಜ ಕಟ್ಟುವ, ಸಭ್ಯತೆ ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.
ವನಸ್ತ್ರೀ ಸಂಘಟನೆ ಟ್ರಸ್ಡಿ ಮನೋರಮಾ ಜೋಶಿ, ಮಹಿಳೆಯರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ತಲೆಮಾರುಗಳಿಗೆ ಈ ಜ್ಞಾನ ವಿಸ್ತಾರವಾಗಬೇಕು. ಹಾಗಾದಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯ ಎಂದರು.
ಸಂಘಟನೆ ಪ್ರಮುಖರಾದ ಸುನಿತಾ ರಾವ್‌ ಪ್ರಾಸ್ತಾವಿಕ ಮಾತನಾಡಿ, ಹಲವು ಮಹಿಳಾ ರೈತರು ಪುಟ್ಟ ಜಾಗದಲ್ಲಿ ಕೈದೋಟ ಮಾಡಿಕೊಂಡಿದ್ದಾರೆ. ಅದಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಸಂಘಟನೆ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು. ಮಹಿಳೆಯರ ಕೈದೋಟ ಜ್ಞಾನವನ್ನು ಸಂಘಟನೆ ವತಿಯಿಂದ ದಾಖಲಿಸಲಾಗುತ್ತಿದೆ. ಈ ಜ್ಞಾನ ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಚಲಾ ಹೆಗಡೆ ಪ್ರಾರ್ಥಿಸಿದರು. ಸ್ಯಾಮಲಾ ಹೆಗಡೆ ಸ್ವಾಗತಿಸಿದರು. ಸಂಘಟನೆಯ ಟ್ರಸ್ಟಿ ಶೈಲಜಾ ಗೋರ್ನಮನೆ ನಿರೂಪಿಸಿದರು.

loading...