ಜನ ಸಾಮಾನ್ಯರಲ್ಲಿಯೂ ಸಾಹಿತ್ಯದ ಅಭಿರುಚಿ ಬೆಳೆಯಬೇಕು: ಸಿದ್ಧಲಿಂಗಪ್ಪ

0
16
loading...

ಕಮತಗಿ: ಕಲೆ ಸಾಹಿತ್ಯ, ಸಂಸ್ಕೃತಿ ಎಂಬುದು ಕೇವಲ ಸಾಹಿತಿಗಳಿಗಷ್ಟೇ ಸಿಮೀತವಾಗದೆ ಜನ ಸಾಮಾನ್ಯರಲ್ಲಿಯೂ ಕೂಡಾ ಸಾಹಿತ್ಯದ ಅಭಿರುಚಿ ಆಸಕ್ತಿ ಬೆಳೆಯಬೇಕು ಅಂದಾಗ ಮಾತ್ರ ಸಾಹಿತ್ಯದ ಬೆಳವಣಿಗೆ ಹೊಂದಲು ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಸಿದ್ಧಲಿಂಗಪ್ಪ ಬೀಳಗಿ ಹೇಳಿದರು.
ಸಮೀಪದ ಶಿರೂರಿನ ಕೆ.ಆರ್‌.ಲಕ್ಕಮ್ಮ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ಸಾಹಿತ್ಯ ವೇದಿಕೆಯ (ಚಕೋರ-521) ಕವಿಕಾವ್ಯ-ವಿಚಾರ ವೇದಿಕೆಯ ಆಶ್ರಯದಲ್ಲಿ ಸಂತ ಶಿಶುನಾಳ ಶರೀಫರ ಕಾವ್ಯ ವಾಚನ ಮತ್ತು ವಿಮರ್ಶೆ ಕಾರ್ಯಕ್ರಮವನ್ನು ಸಸಿಗೆ ನಿರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಕೂಡಾ ಇಂದಿನ ಕಾಲಮಾನಕ್ಕೆ ತಕ್ಕಂತೆ ಪರಿವರ್ತನೆಹೊಂದಬೇಕು ಜೊತೆಗೆ ವಿದ್ಯಾರ್ಥಿಗಳು ತಮ್ಮ ಜ್ಞಾನ ವಿಕಾಸವಾಗಬೇಕಾದರೆ ಓದುವ ಅಭಿರುಚಿಯನ್ನು ಬೆಳಸಿಕೊಳ್ಳಬೇಕು.ಅಲ್ಲದೆ ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯದ ಕಡೆಗೆ ಹೆಚ್ಚು ಗಮನಕೊಡಬೇಕು ಎನ್ನುವ ಉದ್ದೇಶದಿಂದ ಆಕಾಡೆಮಿಯು ಅನೇಕ ಯೋಜನೆಗಳನ್ನು ರೂಪಿಸಿದೆ. ಚಕೋರದ ಮೂಲಕ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು ಶ್ರವಣ, ಮನನ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು. ಕೆ.ಆರ್‌.ಲಕ್ಕಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌.ಮುಳ್ಳೂರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂತ ಶಿಶುನಾಳ ಶರೀಫರು ತಾತ್ವಿಕ, ಪಾರಮಾರ್ಥಿಕ, ಧಾರ್ಮಿಕ ನೆಲೆಯಲ್ಲಿ ರಚನೆ ಮಾಡಿರುವ ತತ್ವಪದಗಳು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತಗೊಳ್ಳುವ ಗಟ್ಟಿತನವನ್ನು ಹೊಂದಿವೆ ಎಂದು ಕನ್ನಡ ಸಾಹಿತ್ಯಕ್ಕೆ ತಮ್ಮದೇಯಾದ ವಿಶಿಷ್ಟ ಕೊಡುಗೆ ನೀಡಿರುವ ಸಂತ ಶಿಶುನಾಳ ಶರೀಫರು ಬಹಳಷ್ಟು ಕಡಿಮೆ ಅವಧಿ ಬದುಕಿದ್ದರೂ ಕೂಡಾ ಸಮಾಜಮುಖಿಗಳಾಗಿ ಬದುಕಿ ತಮ್ಮ ತತ್ವಪದಗಳ ಮೂಲಕ ಸಮಾಜಕ್ಕೆ ಉತ್ತಮವಾದ ದಾರಿ ತೋರಿಸಿದ್ದಾರೆ. ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ತೋರಬೇಕು.
ಮೊಬೈಲ್‌ಗಳನ್ನು ಬಿಟ್ಟು ಬದುಕಿಗೆ ಮಾರ್ಗದರ್ಶನ ಮಾಡುವ ಸಂತರ, ಶರಣರ ವಿಚಾರಗಳನ್ನು ತಿಳಿದುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. ಗುಳೇದಗುಡ್ಡ ಭಂಡಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರಕಾಶ ನರಗುಂದ ಅವರು, ಸಂತ ಶಿಶುನಾಳ ಶರೀಫರ ಗೀತೆ ಪ್ರಸ್ತುತ ಪಡಿಸಿದರು. ಪತ್ರಕರ್ತ ಶಂಕರ ಹೂಗಾರ ಹಾಗೂ ಕವಿ ಆರ್‌.ಸಿ.ಚಿತ್ತವಾಡಗಿ ಅವರು ಕಾವ್ಯಕ್ಕೆ ಪ್ರತಿಕ್ರಿಯೆ ನೀಡಿದರು. ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್‌ ಸಂಚಾಲಕ ಬಸವರಾಜ ನಿಡಗುಂದಿ ಆಶಯ ನುಡಿ ಹೇಳಿದರು. ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಸ್ವಾಗತಿಸಿದರು. ಚಕೋರ ವೇದಿಕೆಯ ಜಿಲ್ಲಾ ಪ್ರತಿನಿಧಿ ಎಂ.ರಮೇಶ ಕಮತಗಿ ನಿರೂಪಿಸಿ, ವಂದಿಸಿದರು.

loading...